ಬೆಂಗಳೂರು : ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಡಬ್ಲೂಎಸ್ಎಸ್ಬಿ, ಡಿಸಿ, ಬಿಬಿಎಂಪಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಬೆಸ್ಕಾಂ, ಜಂಟಿ ಆಯುಕ್ತರು, ಪೊಲೀಸ್ ಅಧಿಕಾರಿಗಳು ಮೊದಲಾದವರೊಂದಿಗೆ ಬಿಬಿಎಂಪಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ ಈ ನಿಟ್ಟಿನಲ್ಲಿ ಎಲ್ಲಾ ಟ್ಯಾಂಕರ್ಗಳನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಂಡು ದರ ನಿಗದಿಪಡಿಸುತ್ತಿದೆ. ಸದ್ಯ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 14781 ಬೋರ್ವೆಲ್ಗಳಿವೆ. ಈ ಪೈಕಿ 6997 ಬೋರ್ವೆಲ್ಗಳು ಬತ್ತಿಹೋಗಿವೆ. ಇದೇ ತಿಂಗಳು 7ರವರೆಗೆ ಟ್ಯಾಂಕರ್ ನೋಂದಣಿಗೆ ಅವಕಾಶ ನೀಡಲಾಗಿದೆ. ಈಗಾಗಲೇ 219 ಟ್ಯಾಂಕರ್ಗಳು ನೋಂದಣಿಯಾಗಿವೆ.
ಸುಮಾರು 3500 ಟ್ಯಾಂಕರ್ಗಳು ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿದ್ದು, ಈ ಪೈಕಿ 219 ಮಾತ್ರ ನೋಂದಣಿಯಾಗಿವೆ. ಮಾರ್ಚ್ 7ರ ನಂತರವೂ ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ಗಳನ್ನು ಸೀಜ್ ಮಾಡಲಾಗುವುದು. ಕುಡಿಯುವ ನೀರಿನ ಬವಣೆ ತಪ್ಪಿಸಲು ಶಾಸಕರಿಗೆ ತಲಾ 110 ಲಕ್ಷ ರೂ. ನೀಡಲಾಗಿದೆ. ಬಿಬಿಎಂಪಿ ಹಾಗೂ ಬಿಡಬ್ಲೂಎಸ್ಎಸ್ಬಿ ಕೂಡ ಅನುದಾನ ನೀಡಿದ್ದು ಒಟ್ಟು 556 ಕೋಟಿ ರೂ. ಹಣವನ್ನು ಕುಡಿಯುವ ನೀರಿಗಾಗಿಯೇ ಮೀಸಲಿಡಲಾಗಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಟ್ಯಾಂಕರ್ಗಳು ಕೆಲವೆಡೆ 500 ಇನ್ನೂ ಕೆಲವೆಡೆ 2000 ರೂ. ಪಡೆಯಲಾಗುತ್ತಿದೆ. ಸರ್ಕಾರ ಮಧ್ಯಪ್ರವೇಶ ಮಾಡಿ ಯಾರಿಗೂ ನಷ್ಟವಾಗದಂತೆ ದರ ನಿಗದಿಮಾಡುತ್ತದೆ. ಮೇ ತಿಂಗಳಲ್ಲಿ ಕಾವೇರಿ 5ನೇ ಹಂತದ ಕಾಮಗಾರಿಗಳು ಮುಕ್ತಾಯವಾಗಲಿದ್ದು, ನೀರಿನ ಬವಣೆ ನೀಗಿಸಲು ಈ ಯೋಜನೆಯೂ ಕೂಡ ನೆರವಾಗಲಿದೆ ಎಂದು ತಿಳಿಸಿದರು.