
ಭೋಪಾಲ್: ಭಾರತದಲ್ಲಿ ಅವಿವಾಹಿತ ಹುಡುಗಿಯರು ಮದುವೆಯ ಭರವಸೆ ನೀಡದ ಹೊರತು ಹುಡುಗರೊಂದಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಮಧ್ಯಪ್ರದೇಶ ಹೈಕೋರ್ಟ್ ನ ಇಂದೋರ್ ಪೀಠವು ಮದುವೆಯಾಗದ ಹುಡುಗಿಯರು ಮದುವೆಯಾಗುವ ಭರವಸೆ ನೀಡದ ಹೊರತು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ವಿವಾಹದ ಆಶ್ವಾಸನೆಯನ್ನು ನೀಡದ ಹೊರತು ಶಾರೀರಿಕ ಸಂಬಂಧ ಬೆಳೆಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರನ್ನೊಳಗೊಂಡ ನ್ಯಾಯಪೀಠವು, ಹುಡುಗಿಯೊಬ್ಬಳೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಹುಡುಗ ತನ್ನ ಕ್ರಿಯೆಗಳ ಪರಿಣಾಮಗಳ ಅರಿತುಕೊಳ್ಳಬೇಕು. ಅವುಗಳನ್ನು ಎದುರಿಸಲು ಸಿದ್ಧನಾಗಿರಬೇಕು ಎಂದು ಹೇಳಿದೆ.
‘ಭಾರತವು ಸಂಪ್ರದಾಯವಾದಿ ಸಮಾಜವಾಗಿದೆ, ಇದು ಇನ್ನೂ ನಾಗರೀಕತೆಯ ಮುಂದುವರೆದ ಅಥವಾ ಕೆಳಮಟ್ಟವನ್ನು ತಲುಪಿಲ್ಲ, ಅವಿವಾಹಿತ ಹುಡುಗಿಯರು ಕೇವಲ ಮೋಜಿಗಾಗಿ ಹುಡುಗರೊಂದಿಗೆ ಶಾರೀರಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆಂದಲ್ಲ. ಕೆಲವರು ಭವಿಷ್ಯದ ಬಗ್ಗೆ ಬೆಂಬಲ, ಮದುವೆಯ ಭರವಸೆ ನೀಡದಿದ್ದರೆ ಒಪ್ಪುವುದಿಲ್ಲ ಎಂದು ಹೇಳಿದೆ.
ವಿವಾಹದ ನೆಪದಲ್ಲಿ ಅತ್ಯಾಚಾರದ ಆರೋಪದಡಿ ಮಹಿಳೆಯೊಬ್ಬರು ಸಲ್ಲಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು ಈ ರೀತಿ ಹೇಳಿದೆ. ಆರೋಪಿ ಯುವಕನ ಪರ ವಕೀಲರು, ಅಪರಾಧ ನಡೆದಾಗ ಮಹಿಳೆ ಅಪ್ರಾಪ್ತ ವಯಸ್ಕಳಲ್ಲ. ಇಬ್ಬರೂ ಒಮ್ಮತದಿಂದ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ವಾದಿಸಿದ್ದರು.
ಯುವತಿ ಅನ್ಯಧರ್ಮದವಳಾದ ಕಾರಣ ಪೋಷಕರು ವಿವಾಹವನ್ನು ವಿರೋಧಿಸಿದ್ದರು. ಅಕ್ಟೋಬರ್ 2018 ರಿಂದ ಮದುವೆಯ ನೆಪದಲ್ಲಿ ಹುಡುಗಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಆರೋಪಿ ನಂತರ ತಾನು ಈಗಾಗಲೇ ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹನಲ್ಲ ಎಂದು ನ್ಯಾಯಾಲಯ ಹೇಳಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.