ರಾಯಪುರ: ಅವಿವಾಹಿತ ಮಗಳು ತನ್ನ ಮದುವೆ ವೆಚ್ಚ ಪಡೆದುಕೊಳ್ಳಬಹುದು ಎಂದು ಛತ್ತೀಸ್ ಗಡ ಹೈಕೋರ್ಟ್ ಹೇಳಿದೆ.
ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ ಪ್ರಕಾರ ಅವಿವಾಹಿತ ಮಗಳು ತನ್ನ ಪೋಷಕರಿಂದ ಮದುವೆ ಖರ್ಚು ಪಡೆಯಲು ಅವಕಾಶವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಛತ್ತೀಸ್ ಗಡದ ದುರ್ಗ ಜಿಲ್ಲೆಯ 35 ವರ್ಷದ ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಭಿಪಾಸ್ ಪುರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆದಿದೆ. ನ್ಯಾಯಮೂರ್ತಿಗಳಾದ ಗೌತಮ್ ಭದೂರಿ ಹಾಗೂ ಸಂಜಯ್ ಎಸ್. ಅಗರವಾಲ್ ಅವರ ಪೀಠದಲ್ಲಿ ವಿಚಾರಣೆ ನಡೆದಿದ್ದು, 1956 ರ ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ ಅನ್ವಯ ಪೋಷಕರಿಂದ ವಿವಾವದ ಖರ್ಚು ಪಡೆದುಕೊಳ್ಳಲು ಅವಕಾಶವಿದೆ ಎಂಬ ವಕೀಲರ ವಾದವನ್ನು ಹೈಕೋರ್ಟ್ ಒಪ್ಪಿದ್ದು, 2017 ರ ಏಪ್ರಿಲ್ 22ರಂದು ದುರ್ಗ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಭಿಲಾಯ್ ಉಕ್ಕು ಘಟಕದ ಉದ್ಯೋಗಿಯಾಗಿರುವ ಭಾನುರಾಮ್ ಅವರ ಪುತ್ರಿ ರಾಜೇಶ್ವರಿ ತನಗೆ ಮದುವೆ ಖರ್ಚು ನೀಡಬೇಕೆಂದು ಕೋರಿ 2016ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ತನ್ನ ತಂದೆ ನಿವೃತ್ತಿಯಾಗುವ ವೇಳೆಗೆ 75 ಲಕ್ಷ ರೂಪಾಯಿ ಪಡೆಯಲಿದ್ದು, ಇದರಲ್ಲಿ ನನ್ನ ಮದುವೆಗೆ 25 ಲಕ್ಷ ರೂಪಾಯಿ ನೀಡಬೇಕೆಂದು ರಾಜೇಶ್ವರಿ ಉಲ್ಲೇಖಿಸಿದ್ದು, ಆಕೆಯ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದರ ವಿರುದ್ಧ ರಾಜೇಶ್ವರಿ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ರಾಜೇಶ್ವರಿ ವಾದವನ್ನು ಎತ್ತಿ ಹಿಡಿದಿದ್ದು, ಮದುವೆಯಾಗದ ಮಗಳು ತನ್ನ ಪೋಷಕರಿಂದ ಮದುವೆ ವೆಚ್ಚವನ್ನು ಪಡೆಯಲು ಅರ್ಹಳು ಎಂದು ಹೇಳಿದೆ
ಭಾರತೀಯ ಸಮಾಜದಲ್ಲಿ, ಸಾಮಾನ್ಯವಾಗಿ ಮದುವೆಯ ಪೂರ್ವ ಮತ್ತು ಮದುವೆಯ ಸಮಯದಲ್ಲಿ ವೆಚ್ಚಗಳನ್ನು ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.