ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಬಸ್ ಸಂಚಾರ ಸೇರಿ ಬಹುತೇಕ ಎಲ್ಲಾ ಚಟುವಟಿಕೆ ಪುನಾರಂಭವಾಗಲಿವೆ. ಬಸ್ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿ ಶೇಕಡ 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿದೆ.
ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳನ್ನು ಹೊರತುಪಡಿಸಿ 28 ಜಿಲ್ಲೆಗಳಲ್ಲಿ ಬಸ್ ಸಂಚಾರ ಶುರುವಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಬಸ್ ಗಳ ಸಂಖ್ಯೆ ಕೂಡ ವಿರಳವಾಗಿದೆ.
ಇಂದಿನಿಂದ ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಎಸಿ ಚಾಲನೆಗೊಳಿಸದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಕುಳಿತು ತಿನ್ನಲು ಸಂಜೆ 5 ಗಂಟೆವರೆಗೆ ಶೇಕಡ 50 ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗಿದೆ.
ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಹೊರಾಂಗಣ ಕ್ರೀಡೆಗಳಿಗೆ ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ. ಸರ್ಕಾರಿ/ಖಾಸಗಿ ಕಛೇರಿಗಳಿಗೆ ಶೇಕಡ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ಇದೆ. ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇಕಡ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.ಅದೇ ರೀತಿ ಜಿಮ್ ಗಳಲ್ಲಿ ಶೇಕಡ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.
ಈಜುಕೊಳ, ಯಾವುದೇ ಸಭೆ ಸಮಾರಂಭ, ಧಾರ್ಮಿಕ, ರಾಜಕೀಯ ಸಭೆ, ಕ್ರೀಡೆ, ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಪಬ್, ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ಅವಕಾಶ ಇರುವುದಿಲ್ಲ.