ಬೆಂಗಳೂರು: ರಾಜ್ಯದಲ್ಲಿ ಮತ್ತಷ್ಟು ಅನ್ಲಾಕ್ ಮಾಡುವ ಕುರಿತಂತೆ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಭೆ ನಡೆಸಲಿದ್ದಾರೆ.
ಸಂಜೆ 5.30 ಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮೂರನೇ ಹಂತದ ಪ್ರಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅನ್ಲಾಕ್ ಬಳಿಕ ರಾಜ್ಯದಲ್ಲಿ ವಿವಿಧ ಚಟುವಟಿಕೆಗಳು ಆರಂಭವಾಗಿದೆ. ಇದರ ಮುಂದುವರೆದ ಭಾಗವಾಗಿ ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಬಾರ್ ಅಂಡ್ ರೆಸ್ಟೋರೆಂಟ್, ಸ್ವಿಮ್ಮಿಂಗ್ ಪೂಲ್, ಸಿನಿಮಾ ಮಂದಿರ, ದೇವಾಲಯ, ಮಸೀದಿ, ಚರ್ಚ್ ಗಳಿಗೆ ಭಕ್ತರಿಗೆ ಪ್ರವೇಶ ಸೇರಿದಂತೆ ನಿರ್ಬಂಧ ತೆರವು ಕುರಿತಂತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
ಸೀಮಿತ ಜನರೊಂದಿಗೆ ಮಾಲ್ ಆರಂಭಿಸಲು ಅವಕಾಶ ನೀಡಬಹುದು. ಅದೇ ರೀತಿ ಷರತ್ತು ವಿಧಿಸಿ ಸಿನಿಮಾ ಮಂದಿರ ಆರಂಭಿಸಲು ಅನುಮತಿ ನೀಡಬಹುದು. ಅಂಗಡಿಗಳಿಗೆ ಸಂಜೆ 7 ಗಂಟೆಯವರೆಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.