ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಕೈತಾ ಗ್ರಾಮದಲ್ಲಿ ವಿಶಿಷ್ಟ ದೇವಾಲಯವಿದೆ. ಈ ಗ್ರಾಮಕ್ಕೆ ನಾಗರಹಾವಿನ ಆಶೀರ್ವಾದವಿದೆ ಅನ್ನೋದು ಜನರ ನಂಬಿಕೆ. ಈ ಗ್ರಾಮದ ಮಣ್ಣಿಗೆ ತುಂಬಾ ಶಕ್ತಿಯಿದೆ, ಇಲ್ಲಿನ ಮಣ್ಣು ತಿನ್ನುವುದರಿಂದ ಹಾವಿನ ವಿಷವನ್ನು ಹೊರಹಾಕುತ್ತದೆ ಎಂಬುದು ಬಹಳ ಹಿಂದಿನಿಂದಲೂ ಜನರು ನಂಬಿರುವ ಸಂಗತಿ.
ನಾಗ ಪಂಚಮಿಯ ಸಂದರ್ಭದಲ್ಲಿ ಛತ್ತೀಸ್‌ಗಢದ ಸಕ್ತಿ ಜಿಲ್ಲೆಯ ಕೈತಾ ಗ್ರಾಮದಲ್ಲಿರುವ ಬಿರತಿಯಾ ಬಾಬಾ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಬಾಬಾ ಮತ್ತು ನಾಗದೇವತೆಯನ್ನು ಪೂಜಿಸಲು ಸಾಲುಗಟ್ಟಿ ನಿಲ್ಲುತ್ತಾರೆ. ಈ ದಿನದಂದು ಶಿವನ ದರ್ಶನ ಮಾಡಿದ್ರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಜನರು ನಂಬುತ್ತಾರೆ.
ಶತಮಾನಗಳ ಹಿಂದೆ ಗ್ರಾಮದ ಜಮೀನುದಾರ ಹಾವಿನ ಜೀವವನ್ನು ಉಳಿಸಿದ್ದನಂತೆ. ಅದಕ್ಕೆ ಪ್ರತಿಯಾಗಿ ಈ ಗ್ರಾಮದ ಮಣ್ಣನ್ನು ತಿಂದರೆ ವಿಷ ನಿವಾರಣೆ ಮಾಡುವ ವರವನ್ನು ಹಾವು ಆತನಿಗೆ ನೀಡಿದೆ ಎಂದು ಹೇಳಲಾಗುತ್ತದೆ. ಹಾವು ಕಚ್ಚಿದ ವ್ಯಕ್ತಿಯನ್ನು ಸಕಾಲದಲ್ಲಿ ಗ್ರಾಮದ ಹೊರವಲಯಕ್ಕೆ ಕರೆತಂದರೆ ಆತನ ಪ್ರಾಣ ಉಳಿಯುತ್ತದೆ ಎಂಬ ನಂಬಿಕೆ ಇಂದಿಗೂ ಮುಂದುವರೆದಿದೆ. ನಾಗಪಂಚಮಿಯ ದಿನ ಪೂಜೆ ಸಲ್ಲಿಸಿದ ಬಳಿಕ ಇಲ್ಲಿನ ಮಣ್ಣನ್ನು ಭಕ್ತರು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಕೇವಲ ನಾಗರಪಂಚಮಿ ಮಾತ್ರವಲ್ಲ, ವರ್ಷವಿಡೀ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಬರುತ್ತಾರೆ.