
ಉತ್ತರ ಪ್ರದೇಶದ ಉನ್ನಾವ್ ನಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದೆ. 60 ವರ್ಷದ ವ್ಯಕ್ತಿ 55 ವರ್ಷದ ಮಹಿಳೆಯ ಕೈ ಹಿಡಿದಿದ್ದಾನೆ. ಈ ಮದುವೆಯಲ್ಲಿ ದಂಪತಿ ಮಕ್ಕಳು ಡಾನ್ಸ್ ಮಾಡಿದ್ರು. ಗಂಜ್‌ಮುರಾದಾಬಾದ್‌ನಲ್ಲಿ ಈ ಮದುವೆ ನಡೆದಿದ್ದು, ಈಗ ಚರ್ಚೆಯಲ್ಲಿದೆ.
ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಕಳೆದ 20 ವರ್ಷಗಳಿಂದ ಲಿವ್ ಇನ್ ನಲ್ಲಿದ್ದರು. ಮುದ್ದಾದ ಮಗನಿಗೆ ಜನ್ಮ ನೀಡಿದ ಜೋಡಿ ಜುಲೈ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 13 ವರ್ಷದ ಮಗ, ತಂದೆ-ತಾಯಿ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ.
ವರ ನಾರಾಯಣ್ ಹಾಗೂ ವಧು ರಾಮರತಿ 20 ವರ್ಷಗಳ ಹಿಂದೆ ಮೊದಲ ಬಾರಿ ಭೇಟಿಯಾಗಿದ್ದರು. ಇಬ್ಬರಿಗೂ ಪಾಲಕರಿರಲಿಲ್ಲ. ಹಾಗಾಗಿ ಮದುವೆಯಾಗಿರಲಿಲ್ಲ. ಮದುವೆಯಾಗದೆ ಒಟ್ಟಿಗಿದ್ದೀರೆಂದು ಅನೇಕರು ಇವರನ್ನು ನಿಂದಿಸಿದ್ದರು.
ಹಾಗಾಗಿ ಈಗ ಮದುವೆಯಾಗಲು ನಿರ್ಧರಿಸಿದ್ದರು. ಗ್ರಾಮದ ಮುಖ್ಯಸ್ಥರು ಮದುವೆ ಜವಾಬ್ದಾರಿ ವಹಿಸಿದ್ದರು. ಅಡುಗೆಯಿಂದ ಹಿಡಿದು ಎಲ್ಲ ಖರ್ಚನ್ನು ಗ್ರಾಮಸ್ಥರು ವಹಿಸಿದ್ದರು. ಮದುವೆಯಲ್ಲಿ ಎಲ್ಲರೂ ಡಾನ್ಸ್ ಮಾಡಿ ಸಂಭ್ರಮಿಸಿದ್ರು.
