![](https://kannadadunia.com/wp-content/uploads/2020/12/Dinesh-Gundurao.jpg)
ಬೆಂಗಳೂರು : ಕೋವಿಡ್ ನಿಯಂತ್ರಣ ಸಂಬಂಧ ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮನ್ಸುಖ್ ಮಾಂಡವಿಯಾ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮನ್ಸುಖ್ ಮಾಂಡವಿಯಾ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು, ಕೇಂದ್ರ ಸಚಿವಾಲಯಗಳು ಮತ್ತು ಆರೋಗ್ಯ ಇಲಾಖೆಗಳ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯ ಕ್ರಮವಾಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್, ಔಷಧಗಳ ಲಭ್ಯತೆ, ಸಂಗ್ರಹ, ಐಸಿಯು ಮತ್ತು ಹಾಸಿಗೆ ಸಾಮರ್ಥ್ಯಗಳ ಹೆಚ್ಚಳ ಸೇರಿದಂತೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಪಿಎಂ ಕೇರ್ಸ್ ಯೋಜನೆಯಡಿಯಲ್ಲಿ ಒದಗಿಸಲಾಗಿರುವ ವೆಂಟಿಲೇಟರ್ಗಳ ನಿರ್ವಹಣಾ ವೆಚ್ಚ ಅಧಿಕವಾಗಿದ್ದು, ಖರ್ಚು ಭರಿಸಲು ನೆರವು ನೀಡುವಂತೆ ಮನವಿ ಮಾಡಿದ್ದೇನೆ. ದಿನನಿತ್ಯದ ಕೋವಿಡ್ ಪ್ರಕರಣಗಳ ಅಂಕಿ ಅಂಶಗಳನ್ನು ನೀಡುವ ಐಸಿಎಂಆರ್ ವೆಬ್ಸೈಟ್ನಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಸಲಹೆ ನೀಡಿದ್ದೇನೆ ಎಂದರು