ನವದೆಹಲಿ: ಮಹಾಮಾರಿ ಡೆಂಘೀ ಜ್ವರಕ್ಕೆ ಕೇಂದ್ರ ಸಚಿವ ಜುಯಲ್ ಓರಾಮ್ ಅವರ ಪತ್ನಿ ಜಿಂಗಿಯಾ ಓರಮ್ ಬಲಿಯಾಗಿದ್ದಾರೆ.
ಕೇಂದ್ರ ಬುಡಕಟ್ಟು ಖಾತೆ ಸಚಿವ ಜುಯಲ್ ಓರಾಮ್ ಅವರ ಪತ್ನಿ ಜಿಂಗಿಯಾ ಓರಮ್ ಅವರು ಒಡಿಶಾದ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಡೆಂಘೀಯಿಂದ ನಿಧನರಾದರು. ಕೇಂದ್ರ ಸಚಿವರೂ ಕೂಡ ಡೆಂಘೀಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಮತ್ತು ಅವರ ಪತ್ನಿ ಕೊನೆಯ ಬಾರಿಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಜಿಂಗಿಯಾ(58) ಅವರು ಪತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಜಿಂಗಿಯಾ ಓರಾಮ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಕೇಳಿ ಅತೀವ ದುಃಖವಾಯಿತು. ಜಿಂಗಿಯಾ ಅವರು ಸಾಮಾಜಿಕ ಮತ್ತು ದತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸದ್ಗುಣಶೀಲ, ಮೃದು ಸ್ವಭಾವದ ವ್ಯಕ್ತಿ. ಜುಯಲ್ ಅವರ ಸುದೀರ್ಘ ರಾಜಕೀಯ ಪ್ರಯಾಣದಲ್ಲಿ ಜಿಂಗಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಮಾಝಿ ಬಣ್ಣಿಸಿದ್ದಾರೆ.