ನವದೆಹಲಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸೋಮವಾರ ನವದೆಹಲಿಯಲ್ಲಿ ಕುಟುಂಬ ಪಿಂಚಣಿದಾರರ ಕುಂದುಕೊರತೆಗಳ ಪರಿಣಾಮಕಾರಿ ಪರಿಹಾರಕ್ಕಾಗಿ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಪಿಂಚಣಿದಾರರ ಕಲ್ಯಾಣ ಇಲಾಖೆಯು ತನ್ನ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಕುಟುಂಬ ಪಿಂಚಣಿದಾರರ ಕುಂದುಕೊರತೆಗಳ ಪರಿಣಾಮಕಾರಿ ಪರಿಹಾರಕ್ಕಾಗಿ ಇಂದಿನಿಂದ ಜುಲೈ 31 ರವರೆಗೆ ಒಂದು ತಿಂಗಳ ವಿಶೇಷ ಅಭಿಯಾನವನ್ನು ಕೈಗೊಂಡಿದೆ. ಇದರಲ್ಲಿ 46 ಸಚಿವಾಲಯಗಳು ಮತ್ತು ಇಲಾಖೆಗಳು ಭಾಗವಹಿಸಲಿವೆ. ಈ ವಿಶೇಷ ಅಭಿಯಾನವು ಕುಟುಂಬ ಪಿಂಚಣಿ ಕುಂದುಕೊರತೆಗಳ ಬಾಕಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಸಚಿವ ಸಿಂಗ್ ಮಾತನಾಡಿ, ಮಹಿಳೆಯರಿಗೆ ಕುಟುಂಬ ಪಿಂಚಣಿ ಯೋಜನೆಗೆ ಇತ್ತೀಚಿನ ತಿದ್ದುಪಡಿಗಳು ಸಕಾರಾತ್ಮಕ ಬೆಳವಣಿಗೆಯಾಗಿದೆ. ಈ ಹಿಂದೆ ವಿಚ್ಛೇದಿತ ಹೆಣ್ಣು ಮಕ್ಕಳು ಪಿಂಚಣಿ ಸೌಲಭ್ಯ ಪಡೆಯಲು ಅನರ್ಹರಾಗಿದ್ದರು. ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ, ಅವರು ಈಗ ಪುರಾವೆಯಾಗಿ ರಿಟ್ ಅರ್ಜಿಯನ್ನು ಸಲ್ಲಿಸಿದ ನಂತರ ಕುಟುಂಬ ಪಿಂಚಣಿಗೆ ಅರ್ಹರಾಗಿದ್ದಾರೆ. ಈ ಅಗತ್ಯವು ನಿಬಂಧನೆಯ ದುರುಪಯೋಗವನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಕಾರ್ಯದರ್ಶಿ ವಿ. ಶ್ರೀನಿವಾಸ್, ಮಾಜಿ ಸೈನಿಕರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ. ನಿತೇನ್ ಚಂದ್ರ, ಬಿಎಸ್ಎಫ್ ಡಿಜಿ ನಿತಿನ್ ಅಗರವಾಲ್, ಅಕೌಂಟ್ಸ್ ಜನರಲ್ ಎಸ್.ಎಸ್. ದುಬೆ ಉಪಸ್ಥಿತರಿದ್ದರು.
ಅರ್ಜಿದಾರರು pgportal.gov.in ಪೋರ್ಟಲ್‌ನಲ್ಲಿ ಕುಂದುಕೊರತೆಗಳನ್ನು ನೇರವಾಗಿ ನೋಂದಾಯಿಸಿಕೊಳ್ಳಬಹುದು. ಅಥವಾ ಟೋಲ್ ಫ್ರೀ ಸಂಖ್ಯೆ 1800-11-1960 ಸಂಪರ್ಕಿಸಬಹುದು.