ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನರ್ರಚನೆಯ ಕುರಿತು ಯಾವುದೇ ಅಧಿಕೃತ ಮಾತುಗಳು ಇಲ್ಲದಿದ್ದರೂ ಸಂಪುಟ ವಿಸ್ತರಣೆಯಂತೂ ಖಚಿತವೆಂದು ಹೇಳಲಾಗುತ್ತಿದೆ.
ಪ್ರಮುಖ ನಾಯಕರಾದ ಜ್ಯೋತಿರಾಧಿತ್ಯ ಸಿಂಧ್ಯ, ಸುಶೀಲ್ ಮೋದಿ, ಸರ್ಬಾನಂದ ಸೋನೋವಾಲ್, ನಾರಾಯಣ ರಾಣೆ ಮತ್ತು ಭೂಪೆಂದ್ರ ಯದವ್ ಸೇರಿದಂತೆ 27 ಮಂದಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ನರೇಂದ್ರ ಮೋದಿ ಸಂಪುಟಕ್ಕೆ ಸೇರುವ ಹೊಸ ಮಂತ್ರಿಗಳೆಂದರೆ, ಮಧ್ಯಪ್ರದೇಶದ ಕಾಂಗ್ರೆಸ್ ಮಾಜಿ ನಾಯಕ ಈಗ ಬಿಜೆಪಿಯಲ್ಲಿರುವ ಜ್ಯೋತಿರಾಧಿತ್ಯ ಸಿಂಧ್ಯ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜಸ್ಥಾನದ ಭೂಪೇಂದ್ರ ಯಾದವ್, ಮಧ್ಯಪ್ರದೇಶದ ಕೈಲಾಶ್ ವಿಜಯವರ್ಗಿಯ, ಬಿಜೆಪಿಯ ವಕ್ತಾರ ಮತ್ತು ಅಲ್ಪಸಂಖ್ಯಾತ ಸಮುದಾಯದ ಸೈಯದ್ ಜಾಫರ್ ಇಸ್ಲಾಂ ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ,
ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್, ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ, ಮಹಾರಾಷ್ಟ್ರದ ಪ್ರೀತಮ್ ಮುಂಡೆ ಸಂಪುಟ ಸೇರಬಹುದು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಿಂದ ಸ್ವತಂತ್ರ ದೇವ್ ಸಿಂಗ್, ಮಹಾರಾಜಗಂಜ್ ಸಂಸದ ಪಂಕಜ್ ಚೌಧರಿ, ವರುಣ್ ಗಾಂಧಿ, ಮತ್ತು ಮೈತ್ರಿ ಪಕ್ಷದ ಸಂಸದೆ ಅನುಪ್ರಿಯಾ ಪಟೇಲ್ ಅವರು ಸಂಭವನೀಯ ಸಚಿವರಾಗಿದ್ದಾರೆ.
ರಾಜ್ಯಸಭೆ ಸದಸ್ಯರಾಗಿರುವ ಒಡಿಶಾದ ಅನಿಲ್ ಜೈನ್, ಅಶ್ವಿನಿ ವೈಷ್ಣವ್, ಬಂಗಾಳದ ಮಾಜಿ ರೈಲ್ವೇ ಸಚಿವ ದಿನೇಶ್ ತ್ರಿವೇದಿ, ಬೈಜಯಂತ್ ಪಾಂಡ ಅವರ ಹೆಸರು ಪರಿಗಣನೆಯಲ್ಲಿದೆ ಎನ್ನಲಾಗಿದೆ.
ಮಾಜಿ ಕೇಂದ್ರ ಸಚಿವ ಪಿಪಿ ಚೌಧರಿ, ರಾಜಸ್ಥಾನದ ಕಿರಿಯ ಸಂಸದ ರಾಹುಲ್ ಕಸ್ವಾನ್ ಮತ್ತು ಸಿಕಾರ್ ಸಂಸದ ಸುಮೇಧಾನಂದ ಸರಸ್ವತಿ. ದೆಹಲಿಯ ಮೀನಾಕ್ಷಿ ಲೇಖಿ, ಬಿಹಾರದ ಚಿರಾಗ್ ಪಾಸ್ವಾನ್ ವಿರುದ್ಧ ದಂಗೆಯೆದ್ದ ಪಶುಪತಿ ಸಚಿವರಾಗಬಹುದು.
ಕರ್ನಾಟಕವನ್ನು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರತಿನಿಧಿಸಬಹುದು, ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್, ಅಹಮದಾಬಾದ್ ಪಶ್ಚಿಮ ಸಂಸದ ಕಿರಿತ್ ಸೋಲಕಿ, ಹರಿಯಾಣದಿಂದ ಮಾಜಿ ಆದಾಯ ತೆರಿಗೆ ಅಧಿಕಾರಿ, ಸಿರ್ಸಾ ಸಂಸದರಾದ ಸುನೀತಾ ದುಗ್ಗಲ್ ಸಹ ಸಂಭವನೀಯರಲ್ಲಿದ್ದಾರೆ.. ತಮ್ಮ ಸಂಸತ್ತಿನ ಭಾಷಣದಿಂದ ಗಮನಸೆಳೆದ ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರನ್ನೂ ಪರಿಗಣಿಸಲಾಗುತ್ತಿದೆ.
ಕೇಂದ್ರ ಸಚಿವರಾಗಿದ್ದ ರಾಮವಿಲಾಸ್ ಪಾಸ್ವಾನ್ ಮತ್ತು ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಮತ್ತು ಅಕಾಲಿದಳ ಹಾಗೂ ಶಿವಸೇನೆ ಮೈತ್ರಿ ತೊರೆದು ಸರ್ಕಾರದಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ ಕೆಲವು ಸ್ಥಾನ ಖಾಲಿಯಾಗಿದ್ದು, ಇವುಗಳಿಗೆ ಹೊಸ ಸಚಿವರ ನೇಮಕ ನಡೆಯಲಿದೆ.