ಮುಂದಿನ ಬುಧವಾರ ನಡೆಯಲಿರುವ ಕೇಂದ್ರ ಬಜೆಟ್ ಸುತ್ತಾ ಹಲವಾರು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೊರೋನಾ ವೈರಸ್ ದಾಳಿಯಿಂದ ಭಾರತದಲ್ಲಿ ಆರೋಗ್ಯ ಕ್ಷೇತ್ರದ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕೆಂಬ ಅಭಿಪ್ರಾಯಗಳು ಹಲವು ವಲಯದಿಂದ ಕೇಳಿಬಂದಿದೆ. ಈ ಬಗ್ಗೆ ನಡೆದಿರುವ ಸಮೀಕ್ಷೆಯಲ್ಲೂ ಇದೇ ಅಂಶ ಬಯಲಾಗಿದೆ. ಗ್ರಾಂಟ್ ಥಾರ್ನ್ಟನ್ ಭಾರತ್ ನಡೆಸಿದ ಬಜೆಟ್ ಪೂರ್ವದ ನಿರೀಕ್ಷೆಗಳ ಸಮೀಕ್ಷೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆಗಳನ್ನ ಉತ್ತೇಜಿಸಬೇಕೆಂಬುದು ಹೆಚ್ಚಿನ ಜನರ ಅಭಿಪ್ರಾಯ ಎಂದು ವರದಿಯಲ್ಲಿ ತಿಳಿದುಬಂದಿದೆ.
ಗ್ರಾಂಟ್ ಥಾರ್ನ್ಟನ್ ಭಾರತ್ ಪ್ರಕಾರ, ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಸುಮಾರು 58% ಜನರು, ಗ್ರಾಮೀಣ ಭಾಗದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನ ಉತ್ತಮಗೊಳಿಸಲು ಖಾಸಗಿ ಹೂಡಿಕೆಗೆ ಉತ್ತೇಜನ ನೀಡಬೇಕೆಂದು ನಂಬುತ್ತಾರೆ. ಹಣಕಾಸಿನ ಪ್ರೋತ್ಸಾಹ ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳ ಮಿಶ್ರಣವು ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸುತ್ತದೆ ಎಂದು ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 55 ಕ್ಕಿಂತ ಹೆಚ್ಚು ಜನರು ಭಾವಿಸುತ್ತಾರೆ ಎಂದು ಸಮೀಕ್ಷೆಯ ವರದಿ ಹೇಳಿದೆ.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ವೆಚ್ಚವಾಗಿ ಆರೋಗ್ಯ ಮೂಲಸೌಕರ್ಯದತ್ತ ಗಮನ ಹರಿಸುವುದು ಅಥವಾ ಹಣ ವೆಚ್ಚ ಮಾಡುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೂಡಿಕೆಗೆ ಪ್ರೋತ್ಸಾಹ ನೀಡುತ್ತದೆ. ಶೇಕಡಾ 78 ಕ್ಕಿಂತ ಹೆಚ್ಚು ಜನರು ಜಿಡಿಪಿಯ ಶೇಕಡಾ 2 ಕ್ಕಿಂತ ಹೆಚ್ಚು ಭಾಗವನ್ನ ಆರೋಗ್ಯ ಕ್ಷೇತ್ರದ ವೆಚ್ಚವಾಗಿ ನಿರೀಕ್ಷಿಸುತ್ತಾರೆ. ಇದಲ್ಲದೆ, ಆರೋಗ್ಯ ಸೇವೆಗಳಿಗೆ ಶೂನ್ಯ ರೇಟೆಡ್ ಸರಕು ಮತ್ತು ಶೂನ್ಯ ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿ ಹೊರಹೊಮ್ಮಿದೆ, ಸುಮಾರು 78 ಪ್ರತಿಶತದಷ್ಟು ಜನರು ಈ ಅಂಶವನ್ನು ಬೆಂಬಲಿಸುತ್ತಿದ್ದಾರೆ.
ಆರೋಗ್ಯ ಕ್ಷೇತ್ರದ 3A ಅಂದರೆ, ಅವೈಲೇಬಲಿಟಿ(ಲಭ್ಯತೆ), ಆ್ಯಕ್ಸೆಸೆಬಲಿಟಿ(ಎಷ್ಟು ಬಳಸಿಕೊಳ್ಳಬಹುದು) ಮತ್ತು ಅಫೊರ್ಡೇಬಿಲಿಟಿ(ಕಡಿಮೆಮೊತ್ತ) ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಸಧ್ಯ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರದ ಹಂಚಿಕೆ ಹೆಚ್ಚಾಗಿದೆ. ಮುಂದಿನ ವರ್ಷಗಳಲ್ಲಿ ಜಿಡಿಪಿಯ ಕನಿಷ್ಠ 3 ಪ್ರತಿಶತದಷ್ಟು ಭಾಗ ಆರೋಗ್ಯ ಕ್ಷೇತ್ರಕ್ಕೆ ಮುಡಿಪಾಗಬಹುದೆಂದು ಗ್ರಾಂಟ್ ಥಾರ್ನ್ಟನ್ ಭಾರತ್ ನ ಪಾಲುದಾರ ಮತ್ತು ವಲಯದ ನಾಯಕ ಭಾನು ಪ್ರಕಾಶ್ ಕಲ್ಮಠ್ ಹೇಳಿದ್ದಾರೆ.