![](https://kannadadunia.com/wp-content/uploads/2020/12/Dinesh-Gundurao.jpg)
ಬೆಂಗಳೂರು : ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಹೊಸ ಬಾಟಲಿಯಲ್ಲಿ ಹಳೆ ಮದ್ಯ ಕೊಟ್ಟಂತೆ. ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಂಡಿಸಿದ ಬಜೆಟ್ ಇದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಳೆದ ವರ್ಷಕ್ಕಿಂತ 5.8%ರಷ್ಟು ಬಜೆಟ್ ಗಾತ್ರ ಹೆಚ್ಚಳ ಮಾಡಿರುವುದೇ ಈ ಬಜೆಟ್‌ನ ಸಾಧನೆ. ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಜನರಿಗೆ ಉಪಯೋಗವಾಗುವ ಯಾವ ಯೋಜನೆಗಳು ಇಲ್ಲ. ಇದೊಂದು ಕಳಪೆ ಗುಣಮಟ್ಟದ ಬಜೆಟ್ ಎಂದು ನಿಸ್ಸಂಶಯವಾಗಿ ಹೇಳಬಹುದು ಎಂದು ಹೇಳಿದ್ದಾರೆ.
ಕೇಂದ್ರದ ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತನ್ನ ಸುಳ್ಳು ಸಾಧನೆಯ ಆತ್ಮಪ್ರಶಂಸೆಯ ಅತಿರೇಖದ ಪರಮಾವಧಿ ತೋರಿಸಿದೆ. ಆದರೆ ಬಜೆಟ್‌ನಲ್ಲಿ ಆಡಿರುವ ಮಾತಿಗೂ ಕೃತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ನಿರುದ್ಯೋಗ, ಬೆಲೆಯೇರಿಕೆ, GDP ಕುಸಿತ ಹಾಗೂ ಕಳೆದ ಹತ್ತು ವರ್ಷಗಳಿಂದ ಜನರಿಗೆ ವಿಪರೀತ ಎನ್ನುವಷ್ಟು ಹೊರೆಯಾಗುತ್ತಿರುವ ದೇಶದ ಸಾಲದ ಬಗ್ಗೆ ಮಾಹಿತಿ ಮುಚ್ಚಿಟ್ಟು ಸುಳ್ಳಿನ ಸರಮಾಲೆಯನ್ನೇ ಪೋಣಿಸಲಾಗಿದೆ. ಹಾಗಾಗಿ ಇದೊಂದು ಸುಳ್ಳಿನ ಬಜೆಟ್ ಎಂದು ಹೇಳಬಹುದು ಎಂದು ಕಿಡಿಕಾರಿದ್ದಾರೆ.
ಕೇಂದ್ರದ ಬಜೆಟ್‌ನಲ್ಲಿ ರೈತರಿಗೆ ಯಾವ ಕೊಡುಗೆಯೂ ಸಿಕ್ಕಿಲ್ಲ. ಎಲ್ಲಾ ಬೆಳೆಗಳಿಗೂ ಎಂಎಸ್‌ಪಿ ಸಿಗಬೇಕು ಎಂಬ ರೈತರ ಬೇಡಿಕೆಗೆ ಕೇಂದ್ರ ಸೊಪ್ಪು ಹಾಕಿಲ್ಲ. ಕೆಲವು ಬೆಳೆಗಳನ್ನು ಮಾತ್ರ MSP ಅಡಿ ತಂದು ರೈತರ ನಡುವೆ ತಾರತಮ್ಯ ಮಾಡಲಾಗಿದೆ. ರಸಗೊಬ್ಬರಗಳ ಬೆಲೆ ಆಕಾಶ ಮುಟ್ಟಿದೆ. ರಸಗೊಬ್ಬರ ಬೆಲೆ ಇಳಿಸುವ ಬಗ್ಗೆ ಬಜೆಟ್‌ನಲ್ಲಿ ಯಾವ ಅಂಶವೂ ಇಲ್ಲ. ರೈತರ ಪಾಲಿಗೆ ಇದೊಂದು ಕರಾಳ ಬಜೆಟ್ ಆಗಿದೆ ಎಂದರು.
ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಯಥಾ ಪ್ರಕಾರ ಈ ಬಾರಿಯೂ ಕರ್ನಾಟಕವನ್ನು ಕಡೆಗಣಿಸಲಾಗಿದೆ. ಇದು ನಿರೀಕ್ಷಿತ. ಕರ್ನಾಟಕವೆಂದರೆ ಮೋದಿ ಸರ್ಕಾರಕ್ಕೆ ಆಗಿಂದಲೂ ಅಸಡ್ಡೆ. ಆ ಪರಂಪರೆ ಈ ಬಜೆಟ್‌ನಲ್ಲೂ ಮುಂದುವರೆದಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ಮೋದಿಯವರಿಗಿರುವ ನಮ್ಮ ರಾಜ್ಯದ ಮೇಲಿನ ದ್ವೇಷದ ಪರಿಣಾಮ ಕರ್ನಾಟಕದ ಪರಿಸ್ಥಿತಿ ಸವತಿ ಮಗನಂತಾಗಿದೆ ಎಂದರು.
ರಾಜ್ಯ BJP ನಾಯಕರು ಕೇಂದ್ರದ ಬಜೆಟ್ ಅದ್ಭುತ ಬಜೆಟ್ ಎಂದು ಬಣ್ಣಿಸಿದ್ದಾರೆ.ಅದು ಸಹಜ ಕೂಡ. ಹೆತ್ತ ಕರುಳಿಗೆ ಹೆಗ್ಗಣ ಮುದ್ದು ಎಂಬಂತೆ ರಾಜ್ಯ BJP ನಾಯಕರಿಗೆ ಕೇಂದ್ರದ ಬಜೆಟ್ ಅದ್ಭುತವಾಗಿ ಕಂಡಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಚುನಾವಣಾ ಸಮಯದಲ್ಲಾದರೂ ಕೇಂದ್ರದ ಬಜೆಟ್‌ನಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ರಾಜ್ಯ BJPನಾಯಕರು ಧ್ವನಿಯೆತ್ತಬೇಕಿತ್ತು. ಆದರೆ ತಮ್ಮ ಸ್ವಾಭಿಮಾನವನ್ನೇ ಮೋದಿ ಮತ್ತು ಅಮಿತ್ ಶಾರವರಿಗೆ ಅಡಮಾನ ಇಟ್ಟಿರುವ BJPಯವರು ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿಯೆತ್ತುವುದು ದೂರದ ಮಾತು ಕಿಡಿಕಾರಿದ್ದಾರೆ.