ಬೆಂಗಳೂರು: ತಡೆರಹಿತ ನಿರಂತರ ವಿದ್ಯುತ್ ಪೂರೈಕೆ ಮಾಡಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಲಬುರಗಿ ಮತ್ತು ಮೈಸೂರು ಭಾಗದಲ್ಲಿ 400 ಕೆವಿ ವರೆಗಿನ ಪ್ರಸರಣ ಮಾರ್ಗಗಳು ಮತ್ತು ಸಬ್ ಸ್ಟೇಷನ್ ಗಳ ನಿರ್ವಹಣೆಗಾಗಿ ಎರಡು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್ ಫಾರ್ಮ್ ವಾಹನಗಳನ್ನು ನಿಯೋಜಿಸಲಿದೆ.
ಸಾಮಾನ್ಯವಾಗಿ ವಿದ್ಯುತ್ ಮಾರ್ಗ ನಿರ್ವಹಣೆ ಸಂದರ್ಭದಲ್ಲಿ ಗಂಟೆಗಟ್ಟಲೇ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕಾಗುತ್ತದೆ. ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್ ಫಾರ್ಮ್ ವಾಹನಗಳ ಬಳಕೆಯಿಂದ ಗ್ರಾಹಕರಿಗೆ ತಡೆರಹಿತ ವಿದ್ಯುತ್ ಪೂರೈಸಬಹುದಾಗಿದೆ. ಈ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಈಗಾಗಲೇ ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿಯಲ್ಲಿ ಇಂತಹ ಮೂರು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್ ಫಾರ್ಮ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಂದ ಕೆಪಿಟಿಸಿಎಲ್ ಗೆ ಕೋಟ್ಯಂತರ ರೂ. ಉಳಿತಾಯವಾಗಲಿದೆ.
ಸಾಂಪ್ರದಾಯಿಕ ವಿಧಾನದಲ್ಲಿ ಪ್ರಸರಣ ಮಾರ್ಗಗಳ ದುರಸ್ತಿ ಅಥವಾ ನಿರ್ವಹಣೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದು ಅನಿವಾರ್ಯ. ಇದರಿಂದ ಕನಿಷ್ಠ 5 ಗಂಟೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ಆದರೆ, ಹಾಟ್ ಲೈನ್ ನಿರ್ವಹಣೆ ತಂತ್ರಜ್ಞಾನದ ಅತ್ಯಾಧುನಿಕ ಇನ್ಸುಲೇಟೆಡ್ ಬಕೆಟ್ ವ್ಯಾನ್ ಬಳಕೆಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸದೇ ನಿರ್ವಹಣೆ ಮಾಡಬಹುದು. ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಜತೆಗೆ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.