ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ಮಕ್ಕಳ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡಿದೆ. ನವೆಂಬರ್ 8 ರಿಂದ ಪೂರ್ಣಪ್ರಮಾಣದಲ್ಲಿ ಶಾಲೆಗಳು ನಡೆಯಲಿದೆ. ಪ್ರಾಥಮಿಕ, ಪ್ರೌಢಶಾಲೆ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಿನಲ್ಲಿ ಒಂದೇ ಜತೆ ಸಮವಸ್ತ್ರದಲ್ಲಿ ವರ್ಷವನ್ನು ಕಳೆಯುವ ಪರಿಸ್ಥಿತಿ ಎದುರಾಗಿದೆ.
ಎರಡನೇ ಜೊತೆ ಸಮವಸ್ತ್ರ ನೀಡಲು ಅನುದಾನ ಬಿಡುಗಡೆಯಾಗದ ಕಾರಣ ವಿದ್ಯಾರ್ಥಿಗಳಿಗೆ ಒಂದೇ ಜೊತೆ ಸಮವಸ್ತ್ರವೇ ಗತಿಯಾಗಿದೆ. ಸಮವಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಶೇಕಡ 60 ಮತ್ತು ರಾಜ್ಯ ಸರ್ಕಾರ ಶೇಕಡ 40 ರಷ್ಟು ಅನುದಾನ ನೀಡುತ್ತಿದೆ. ಮೊದಲ ಜತೆ ಸಮವಸ್ತ್ರ ನೀಡಿದ ನಂತರ ಶಿಕ್ಷಣ ಇಲಾಖೆ ಎರಡನೇ ಜೊತೆ ಸಮವಸ್ತ್ರಕ್ಕೆ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.
ಎರಡು ವರ್ಷಗಳ ಹಿಂದಿನ ಸಮವಸ್ತ್ರ ಖರೀದಿಗೆ ಬಾಕಿ ಇದ್ದ ಹಣವನ್ನು ಸಮಗ್ರ ಶಿಕ್ಷಣ ಇಲಾಖೆ ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಿದೆ. ಕೊರೋನಾ ಕಾರಣದಿಂದ ಶಾಲೆಗಳು ವಿಳಂಬವಾದ ಸಮವಸ್ತ್ರ ನೀಡಿಕೆ ವಿಳಂಬವಾಗಿದೆ. ಈಗಾಗಲೇ ಶಿಕ್ಷಣ ಇಲಾಖೆಯಿಂದ ಮೊದಲ ಜತೆ ಸಮವಸ್ತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.