
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷ ಎರಡು ಜತೆ ಸಮವಸ್ತ್ರ ವಿತರಿಸಲಾಗುವುದು.
ಕಳೆದ ಸಲ ಟೆಂಡರ್ ಪ್ರಕ್ರಿಯೆ ವಿಳಂಬವಾದ ಕಾರಣ ಸಮವಸ್ತ್ರ ಪೂರೈಕೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕಳೆದ ವರ್ಷದ ಸಮವಸ್ತ್ರ ಸೇರಿ ಎರಡು ಜೊತೆ ಸಮವಸ್ತ್ರ ನೀಡಲಾಗುವುದು. ಇದಕ್ಕಾಗಿ 180 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಸಮವಸ್ತ್ರ ಪೂರೈಕೆಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗಗಳ ಅಭಿವೃದ್ಧಿ ನಿಗಮ ಹಾಗೂ ಖಾಸಗಿ ಕಂಪನಿಯೊಂದಕ್ಕೆ ಕಾರ್ಯದೇಶ ನೀಡಲಾಗಿದೆ.
ಒಂದರಿಂದ ಹತ್ತನೇ ತರಗತಿವರೆಗೆ ಓದುತ್ತಿರುವ ಎಲ್ಲಾ ವರ್ಗದ ಮಕ್ಕಳಿಗೂ ಎರಡು ಜೊತೆ ಸಮವಸ್ತ್ರ ನೀಡಲಾಗುವುದು. ರಾಜ್ಯ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದ್ದು, ರಾಜ್ಯದ 50,066 ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಒಂದರಿಂದ ಹತ್ತನೇ ತರಗತಿಯ 46.37 ಲಕ್ಷ ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ನೀಡಲಾಗುತ್ತದೆ ಎಂದು ಹೇಳಲಾಗಿದೆ.