ಬೆಂಗಳೂರು: ಏಕರೂಪದ ಸಮವಸ್ತ್ರ ಸಂಹಿತೆಗೆ ನಿವೃತ್ತ ಕುಲಪತಿಗಳ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯದ ಕಾಲೇಜುಗಳು, ವಿಶ್ವವಿದ್ಯಾಲಯ ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಸಮವಸ್ತ್ರ ಸಂಹಿತೆ ಜಾರಿಗೊಳಿಸಬೇಕು. ಇದರಿಂದ ಮಕ್ಕಳಲ್ಲಿ ಸಮಾನತೆ, ಶಾಂತಿಯ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಅಭಿಪ್ರಾಯಪಟ್ಟಿದೆ.
ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಬಡವರು, ಶ್ರೀಮಂತರು, ಜಾತಿ, ಧರ್ಮದವರು ಅಡೆತಡೆಯಿಲ್ಲದೆ ಸಮಾನ ವ್ಯವಸ್ಥೆಯಲ್ಲಿ ಶಿಕ್ಷಣ ಕಲಿಯಲು ವಸ್ತ್ರಸಂಹಿತೆ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ ಉಪಾಧ್ಯಕ್ಷ ಪ್ರೊ.ಕೆ. ನಾರಾಯಣ ಗೌಡ ಹೇಳಿದ್ದಾರೆ.
ತರಗತಿಗಳಲ್ಲಿ ಏಕರೂಪದ ವಸ್ತ್ರಸಂಹಿತೆ ಇರುವುದು ಸರಿಯಾದ ಕ್ರಮವಾಗಿದ್ದು, ರಾಜ್ಯದ ಎಲ್ಲಾ ಕಾಲೇಜುಗಳು, ವಿವಿಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸರ್ಕಾರ ಏಕರೂಪದ ವಸ್ತ್ರಸಂಹಿತೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.