ನವದೆಹಲಿ: ಭಾರತದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಶೇಕಡ 83 ರಷ್ಟು ವಿದ್ಯಾವಂತ ಯುವಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ನವದೆಹಲಿಯ ಭಾರತದ ಮಾನವ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾದ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತದ ಉದ್ಯೋಗ ವರದಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ನಿರುದ್ಯೋಗಿಗಳಲ್ಲಿ ಪಿಯುಸಿ ಅಥವಾ ಪದವಿ ಪಡೆದಿರುವ ಯುವಕರ ಪಾಲು 2000ದಲ್ಲಿ ಶೇಕಡ 35.2ರಷ್ಟು ಇದ್ದರೆ, 2022 ರಲ್ಲಿ 65.7 ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ILO) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಡೆವಲಪ್‌ಮೆಂಟ್(IHD) ಜಂಟಿಯಾಗಿ ಪ್ರಕಟಿಸಿದ ಭಾರತದ ಉದ್ಯೋಗ ವರದಿ 2024 ರ ಪ್ರಕಾರ, 2000 ಮತ್ತು 2019 ರ ನಡುವೆ ಯುವಕರ ಉದ್ಯೋಗ ಹೆಚ್ಚಾಯಿತು. ಆದರೆ, COVID-19 ಸಾಂಕ್ರಾಮಿಕ ವರ್ಷಗಳಲ್ಲಿ ಕುಸಿತ ಕಂಡಿದೆ. ಆದಾಗ್ಯೂ, ವಿದ್ಯಾವಂತ ಯುವಕರು, ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿನ ಮಟ್ಟದ ನಿರುದ್ಯೋಗವನ್ನು ಅನುಭವಿಸಿದರು.
ಇದಲ್ಲದೆ, ಕಾರ್ಮಿಕ ಬಲದ ಭಾಗವಹಿಸುವಿಕೆ ದರ(LFPR), ಕಾರ್ಮಿಕರ ಜನಸಂಖ್ಯೆಯ ಅನುಪಾತ(WPR), ಮತ್ತು ನಿರುದ್ಯೋಗ ದರ(UR) 2000 ಮತ್ತು 2018 ರ ನಡುವೆ ನಿರಂತರ ಕುಸಿತವನ್ನು ಕಂಡಿದೆ, 2019 ರ ನಂತರದ ಸುಧಾರಣೆಯ ಲಕ್ಷಣಗಳನ್ನು ಮಾತ್ರ ತೋರಿಸುತ್ತದೆ ಎಂದು ವರದಿ ತಿಳಿಸಿದೆ.