ಜೈಲಿನೊಳಗೆ ಫ್ರೀ ಊಟ ಸಿಗುತ್ತದೆಂಬ ಕಾರಣಕ್ಕೆ ತಮಿಳುನಾಡಿನ ನಿರುದ್ಯೋಗಿ ಯುವಕನೊಬ್ಬ ಹುಸಿಬಾಂಬ್ ಕರೆ ಮಾಡಿ ಬಂಧನಕ್ಕೊಳಗಾಗಿದ್ದಾನೆ.
ಈರೋಡ್‌ನ ರೈಲ್ವೇ ನಿಲ್ದಾಣ ಮತ್ತು ಮುಖ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಗಳು ಸಂಭವಿಸುತ್ತವೆ ಎಂದು ಕೆಲವು ದಿನಗಳ ಹಿಂದೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಕ್ಕಾಗಿ ಕೊಯಮತ್ತೂರಿನ 34 ವರ್ಷದ ನಿರುದ್ಯೋಗಿ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನದ ಬಳಿಕ ಆರೋಪಿಯು ಪೊಲೀಸರಿಗೆ ತಾನು ಜೀವನಾಂಶವನ್ನು ಪೂರೈಸಲು ಹೆಣಗಾಡುತ್ತಿದ್ದೇನೆ. ಅಪರಾಧ ಮಾಡಿ ಕಂಬಿ ಹಿಂದೆ ಸೇರಿದರೆ ಜೈಲಲ್ಲಿ ಪ್ರತಿದಿನ ಹೊಟ್ಟೆತುಂಬ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಹುಸಿಬಾಂಬ್ ಕರೆ ಮಾಡಿದ್ದಾಗಿ ಹೇಳಿದ್ದಾನೆ.
ಪೊಲೀಸರ ಪ್ರಕಾರ ಚೆನ್ನೈನ ಪೊಲೀಸ್ ಕಂಟ್ರೋಲ್ ರೂಮ್‌ಗೆ ಎರಡು ದಿನಗಳ ಹಿಂದೆ ಹುಸಿ ಬಾಂಬ್ ಫೋನ್ ಕರೆ ಬಂದಿತ್ತು. ಇದರಿಂದಾಗಿ ಮುಖ್ಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಪಟ್ಟಣದ ಶಾಪಿಂಗ್ ಮಾರುಕಟ್ಟೆಗಳಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವಂತೆ ಈರೋಡ್ ಪೊಲೀಸರಿಗೆ ಎಚ್ಚರಿಕೆ ನೀಡಲಾಯಿತು.
ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಕರೆ ಮಾಡಿದವರು ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ನಿವಾಸಿ ಸಂತೋಷ್ ಕುಮಾರ್ ಎಂದು ಪೊಲೀಸರು ಕಂಡುಕೊಂಡರು. ಶನಿವಾರ ರಾತ್ರಿ ಈರೋಡ್ ಪೊಲೀಸರು ಸಂತೋಷ್ ಕುಮಾರ್ ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ 2019 ಮತ್ತು 2021 ರಲ್ಲಿ ಇದೇ ರೀತಿಯ ಹುಸಿ ಕರೆಗಳನ್ನು ಮಾಡಿದ್ದ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ ಶಿಕ್ಷೆ) ಮತ್ತು 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಆರೋಪಿಯನ್ನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.