2005 ರ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಿಪಿಓ ಮಹಿಳಾ ಉದ್ಯೋಗಿಯೊಬ್ಬರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ತನ್ನ ಕರ್ತವ್ಯಕ್ಕೆಂದು ಎಂದಿನಂತೆ ಮನೆಯಿಂದ ಕ್ಯಾಬ್ ನಲ್ಲಿ ಕಛೇರಿಗೆ ಹೋಗುವಾಗ ಚಾಲಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ.
ಈ ಪ್ರಕರಣದಲ್ಲಿ ಕ್ಯಾಬ್ ಚಾಲಕ ಶಿವಕುಮಾರ್ ಅಲಿಯಾಸ್ ಶಿವ ಆಲಿಯಾಸ್ ಶಿವಮೂರ್ತಿ ಎಂಬಾತನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪಿ ಪಟ್ಟಿ ಸಲ್ಲಿಸಿದ ವೇಳೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬದುಕಿರುವವರೆಗೂ ಆರೋಪಿ ಜೈಲಿನಲ್ಲಿ ಕಳೆಯಬೇಕು ಎಂದು ತೀರ್ಪು ನೀಡಿದ್ದು, ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು.
ಈ ಹಿನ್ನೆಲೆಯಲ್ಲಿ ಶಿವಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮಂಗಳವಾರದಂದು ಈ ಪ್ರಕರಣದ ತೀರ್ಪು ಹೊರಬಿದ್ದಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ರಾಜೇಶ್ ಬಿಂದಲ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯ ಪೀಠ ಆರೋಪಿಯು 30 ವರ್ಷಗಳ ಸೆರೆವಾಸ ಪೂರ್ಣಗೊಳಿಸುವವರೆಗೂ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿದೆ.