ನವದೆಹಲಿ: ಗಂಭೀರ ಅನಾರೋಗ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ವದಂತಿಗಳು ಹರಿದಾಡುತ್ತಿದ್ದು, ವಿಷಪ್ರಾಶನವೇ ಕಾರಣ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ.
ಭಾರತದಿಂದ ಪರಾರಿಯಾದ ಇಬ್ರಾಹಿಂ(67) ಹಲವಾರು ವರ್ಷಗಳಿಂದ ಕರಾಚಿಯಲ್ಲಿ ನೆಲೆಸಿದ್ದು, ಜಗತ್ತಿನಾದ್ಯಂತ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾನೆ.
ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳಲ್ಲಿ ಒಬ್ಬನಾದ ದಾವೂದ್ ಇಬ್ರಾಹಿಂ ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. 250 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮತ್ತು ಸಾವಿರಾರು ಮಂದಿ ಗಾಯಗೊಂಡ 1993 ರ ಮುಂಬೈ ಬಾಂಬ್ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆ.
ಪಾಕಿಸ್ತಾನಿ ಮತ್ತು ಭಾರತೀಯ ಅಧಿಕಾರಿಗಳು ಈ ಸುದ್ದಿಯನ್ನು ಅಧಿಕೃತವಾಗಿ ದೃಢೀಕರಿಸದ ಕಾರಣ ಅವರ ಆಸ್ಪತ್ರೆಗೆ ದಾಖಲಾದ ಸಂದರ್ಭಗಳು ಗೌಪ್ಯವಾಗಿ ಉಳಿದಿವೆ. ಅವರ ಹಠಾತ್ ಆರೋಗ್ಯ ಹದಗೆಡಲು ವಿಷವೇ ಕಾರಣ ಎಂಬ ಊಹಾಪೋಹಗಳು ದಟ್ಟವಾಗಿದೆ.