ಲಖನೌ: ‘ಇಂಡಿಯಾ’ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಪಡಿತರ ನೀಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.
ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ದೇಶದ ಪರಿಸ್ಥಿತಿ ಗಮನಿಸಿದಾಗ ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಹೊಸ ಸರ್ಕಾರ ರಚಿಸಲಿದೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಹೋರಾಟವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದಲ್ಲಿ ಎಷ್ಟೊಂದು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಬಿಜೆಪಿಯಿಂದ ಚುನಾವಣಾ ಪ್ರಕ್ರಿಯೆ ದುರುಪಯೋಗವಾಗುತ್ತಿದೆ. ಲೋಕಸಭೆ ಚುನಾವಣೆ ಮತ ಎಣಿಕೆ ದಿನವಾದ ಜೂನ್ 4ರಂದು ಪ್ರಧಾನಿ ಮೋದಿ ಅವರಿಗೆ ಬೀಳ್ಕೊಡುಗೆ ನೀಡಲು ದೇಶದ ಜನ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆಹಾರ ಭದ್ರತೆ ಅಡಿಯಲ್ಲಿ, ಇಂಡಿಯಾ ಸಮ್ಮಿಶ್ರ ಸರ್ಕಾರವು ಬಡವರಿಗೆ ಪ್ರತಿ ತಿಂಗಳು 10 ಕೆಜಿ ಆಹಾರ ಧಾನ್ಯಗಳನ್ನು ನೀಡುತ್ತದೆ. ಇದೊಂದು ಮಹತ್ವದ ಘೋಷಣೆಯಾಗಿದೆ. ಕಾಂಗ್ರೆಸ್-ಯುಪಿಎ ಸರ್ಕಾರವೇ ಆಹಾರ ಭದ್ರತಾ ಕಾನೂನು ತಂದಿದ್ದು, ಇಂದು ಮೋದಿಜೀ ಅದೇ ಬಡವರ ಪಡಿತರ ಮೇಲೆ ತಮ್ಮ ಚಿತ್ರ ಅಂಟಿಸಿಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.