ಉದ್ಘಾಟನೆಗೂ ಮುನ್ನವೇ ನಿರ್ಮಾಣ ಹಂತದ ಸೇತುವೆ ಕುಸಿದುಬಿದ್ದಿರೋ ಘಟನೆ ಬಿಹಾರದಲ್ಲಿ ನಡೆದಿದೆ. ಬೇಗುಸರಾಯ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗವು ಕುಸಿದಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ಉದ್ಘಾಟನೆಯಾಗದಿದ್ದರೂ ಸುಮಾರು 20,000 ಜನಸಂಖ್ಯೆಯನ್ನು ಹೊಂದಿರುವ ಮೂರು ಪಂಚಾಯತ್‌ಗಳನ್ನು NH-31 ಗೆ ಸಂಪರ್ಕಿಸುವ ಕಾರಣ ಸೇತುವೆ ಮೇಲೆ ಲಘು ವಾಹನ ಸಂಚಾರ ನಡೆಯುತ್ತಿತ್ತು.
ಬಿಹಾರದ ಅಧಿಕಾರಿಗಳ ಪ್ರಕಾರ ಸಾಹೇಬ್‌ಪುರ ಕಮಲ್ ಬಳಿ ಇರುವ ಬುರ್ಹಿ ಗಂಡಕ್ ನದಿಗೆ 206 ಮೀಟರ್ ಉದ್ದದ ಸೇತುವೆಯನ್ನು ಮಾ ಭಗವತಿ ಕನ್‌ಸ್ಟ್ರಕ್ಷನ್, ಬೇಗುಸರಾಯ್, ರಾಜ್ಯ ಸರ್ಕಾರದ ರಸ್ತೆ ನಿರ್ಮಾಣ ಇಲಾಖೆ (ಆರ್‌ಸಿಡಿ) ಅಡಿಯಲ್ಲಿ ಅಂದಾಜು ₹ 13 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ.
ಗುರುವಾರ ಪಿಲ್ಲರ್ ಸಂಖ್ಯೆ 2 ಮತ್ತು 3 ರಲ್ಲಿ ಬಿರುಕುಗಳು ಉಂಟಾಗಿದ್ದು ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸದಿದ್ದರೆ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಘಟನೆಯ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಬಲ್ಲಿಯಾ ಉಪವಿಭಾಗಾಧಿಕಾರಿ (ಎಸ್‌ಡಿಒ) ರೋಹಿತ್ ಕುಮಾರ್ ಹೇಳಿದ್ದಾರೆ.