ನವದೆಹಲಿ: 2023ರ ಮಾರ್ಚ್ ಅಂತ್ಯದ ವೇಳೆಗೆ ದೇಶದ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ ಠೇವಣಿಗೆ ಮೊತ್ತ 42,270 ಕೋಟಿ ರೂ.ಗೆ ತಲುಪಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ ಕರಾಡ್ ಅವರು ಲಿಖಿತ ಉತ್ತರ ನೀಡಿದ್ದು, ಸರ್ಕಾರಿ ವಲಯದ ಬ್ಯಾಂಕುಗಳಲ್ಲಿ 36,185 ಕೋಟಿ ರೂ. ವಾರಸುದಾರರು ಇಲ್ಲದ ಠೇವಣಿ ಇದೆ. ಖಾಸಗಿ ಬ್ಯಾಂಕುಗಳಲ್ಲಿ ಈ ಮೊತ್ತ 6087 ಕೋಟಿ ರೂಪಾಯಿ ಇದೆ ಎಂದು ತಿಳಿಸಿದ್ದಾರೆ.
2022ರ ಹಣಕಾಸು ವರ್ಷದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ 32,934 ಕೋಟಿ ರೂ. ಇತ್ತು. 2023ರ ಮಾರ್ಚ್ ಅಂತ್ಯದ ವೇಳೆಗೆ ಶೇಕಡ 28 ರಷ್ಟು ಏರಿಕೆಯಾಗಿದ್ದುಮ 42,270 ಕೋಟಿ ರೂಪಾಯಿಗೆ ತಲುಪಿದೆ. ಸರಿಯಾದ ಹಕ್ಕುದಾರರಿಗೆ ಠೇವಣಿ ಮರಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.