ಕೇವಲ 24 ಗಂಟೆಗಳಲ್ಲಿ ಕೋವಿಡ್ 19 ಲಸಿಕೆಯ 10 ಡೋಸ್ ಗಳನ್ನು ಪಡೆದಿದ್ದಕ್ಕಾಗಿ ನ್ಯೂಜಿಲೆಂಡ್‌ನ ವ್ಯಕ್ತಿಯನ್ನು ಸ್ವಾರ್ಥಿ ಎಂದು ಜರೆಯಲಾಗಿದ್ದು, ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ.
ವರದಿ ಪ್ರಕಾರ, ಹಲವಾರು ಲಸಿಕೆ ಕೇಂದ್ರಗಳಲ್ಲಿ ಅಪಾಯಿಂಟ್‌ಮೆಂಟ್‌ಗಾಗಿ ಸೈನ್ ಅಪ್ ಮಾಡಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆ ವ್ಯಕ್ತಿ ಇತರ ಜನರ ಪರವಾಗಿ ತಾನೇ ಲಸಿಕೆಗಳನ್ನು ಪಡೆದುಕೊಂಡಿದ್ದಾನೆ. ಹೀಗಾಗಿ ನ್ಯೂಜಿಲೆಂಡ್‌ನ ಆರೋಗ್ಯ ಸಚಿವಾಲಯ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಈ ಪರಿಸ್ಥಿತಿ ಬಗ್ಗೆ ತುಂಬಾ ಚಿಂತಿತರಾಗಿದ್ದು, ಸೂಕ್ತ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಆರೋಗ್ಯ ಸಚಿವಾಲಯದ ಕೋವಿಡ್-19 ಲಸಿಕೆ ವ್ಯವಸ್ಥಾಪಕ ಆಸ್ಟ್ರಿಡ್ ಕೂರ್ನ್ನೀಫ್ ಹೇಳಿದ್ದಾರೆ. ಸದ್ಯಕ್ಕೆ ಈ ಘಟನೆ ಎಲ್ಲಿ ನಡೆದಿದೆ ಎಂದು ಆರೋಗ್ಯ ಸಚಿವಾಲಯ ಇನ್ನೂ ಕೂಡ ಅಧಿಕೃತವಾಗಿ ತಿಳಿಸಿಲ್ಲ. ಆದರೆ, ಲಸಿಕೆ ಪಡೆದಿರುವ ವ್ಯಕ್ತಿಗೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ ಎಂದು ಹೇಳಲಾಗಿದೆ.
ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಹಲವಾರು ಲಸಿಕೆಗಳನ್ನು ಸ್ವೀಕರಿಸಿರುವ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲ ಎಂದು ಆಕ್ಲೆಂಡ್ ವಿಶ್ವವಿದ್ಯಾನಿಲಯ ಹೆಲೆನ್ ಪೆಟೌಸಿಸ್-ಹ್ಯಾರಿಸ್ ಹೇಳಿದ್ದಾರೆ. ಸಾಮಾನ್ಯವಾಗಿ ಲಸಿಕೆ ಹಾಕಿದ ಬಳಿಕ ಜ್ವರ, ತಲೆನೋವು, ಮೈಕೈ ನೋವುಗಳಂತಹ ಅಸಹನೀಯ ಅನುಭವವಾಗುತ್ತದೆ. ಹೀಗಾಗಿ ಮರುದಿನ ಅವರು ಸಾಕಷ್ಟು ನೋವನ್ನು ಅನುಭವಿಸಬಹುದು ಎಂದು ಅವರು ಹೇಳಿದ್ದಾರೆ.