
ಅದರಲ್ಲೂ ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ತೆರಳುತ್ತಿರುವ ಪ್ರವಾಸಿಗರು ಎಚ್ಚರಿಕೆಯ ಬೋರ್ಡ್ ಗಳನ್ನು ಹಾಕಿದ್ದರೂ ಸಹ ಅದನ್ನು ಗಣನೆಗೆ ತೆಗೆದುಕೊಳ್ಳದೆ ಸಾಹಸ ಮಾಡಲು ಹೋಗಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಈಗಾಗಲೇ ಇಂತಹ ಹಲವು ಪ್ರಕರಣಗಳು ನಡೆದಿದ್ದು, ಇದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ಉತ್ತರಾಖಂಡ ಚಮೋಲಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕಂಡುಬರುವಂತೆ ಜಲಪಾತವೊಂದರ ಬಳಿ ಕೆಲ ಪ್ರವಾಸಿಗರು ಸ್ನಾನ ಮಾಡುತ್ತಿದ್ದಾರೆ. ಆಗ ಇದ್ದಕ್ಕಿದ್ದಂತೆ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಜಲಕ್ರೀಡೆಯಾಡುತ್ತಿದ್ದ ಪ್ರವಾಸಿಗರು ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋಗಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಈ ರೀತಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗುವುದು ಸಾಮಾನ್ಯವಾಗಿದ್ದು, ಹೀಗಾಗಿ ಪ್ರವಾಸಿಗರು ನೀರಿನ ಜೊತೆ ಹುಡುಗಾಟವಾಡುವುದನ್ನು ಬಿಡಬೇಕಿದೆ. ಘಟನೆಯ ವೀಡಿಯೋವನ್ನು ಉತ್ತರಾಖಂಡನ ಚಮೋಲಿ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದು, ಪ್ರವಾಸಿಗರು ಮಳೆಗಾಲದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.