ನಿಸರ್ಗದಲ್ಲಿ ಆಗುವ ಕ್ರಿಯೆಗಳೇ ವಿಚಿತ್ರ. ಮನುಷ್ಯ ಎಷ್ಟೇ ಪ್ರಯೋಗಶೀಲನಾಗಿದ್ದರೂ, ಏನೇನೋ ಸಾಹಸಮಯ ಕಾರ್ಯಗಳನ್ನು ಮಾಡಿ ಎಷ್ಟೇ ಮುಂದುವರೆದಿದ್ದೇನೆ ಎಂದು ಹೇಳುತ್ತಿದ್ದರೂ ಪ್ರಕೃತಿಯ ಮುಂದೆ ಆತನದ್ದು ಎಲ್ಲವೂ ಶೂನ್ಯವೇ.
ಹೀಗೆ ಪ್ರಕೃತಿಯ ವೈಚಿತ್ರ್ಯ ಸಾರುವ ಹಲವಾರು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲವು ಘಟನೆಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಅಂಥದ್ದೇ ಒಂದು ಘಟನೆಯ ವಿಡಿಯೋ ಇದಾಗಿದೆ.
ಬ್ರೆಜಿಲ್ನಲ್ಲಿರುವ 100 ಅಡಿ ಏಸುವಿನ ಪ್ರತಿಮೆಗೆ ಮಿಂಚು ಹೊಡೆದಿರುವ ದೃಶ್ಯ ಇದಾಗಿದೆ. ಯಾವುದೋ ಒಂದು ಶಕ್ತಿ ಆಕಾಶದಿಂದ ಬಂದು ಏಸುವಿನ ಶರೀರ ಪ್ರವೇಶಿಸಿದಂತೆ ಈ ದೃಶ್ಯ ದಾಖಲಾಗಿದೆ. ಚಲನಚಿತ್ರಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಕಾಣಸಿಗುವ ಈ ದೃಶ್ಯ ನಿಜವಾಗಿಯೂ ನಡೆದಿರುವುದನ್ನು ನೋಡಿ ಜನರು ದಂಗಾಗಿದ್ದಾರೆ.
ಈ ದೃಶ್ಯವು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ. ಕ್ರೈಸ್ಟ್ ದಿ ರಿಡೀಮರ್ ಪ್ರತಿಮೆಯ ತಲೆಗೆ ನೇರವಾಗಿ ಮಿಂಚು ಹೊಡೆದಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಫೆಬ್ರವರಿ 10 ರಂದು ಈ ಘಟನೆ ನಡೆದಿದೆ.
ಇದನ್ನು ಫರ್ನಾಂಡೋ ಬ್ರಾಗಾ ಎನ್ನುವ ಛಾಯಾಚಿತ್ರಕಾರರು ಸೆರೆಹಿಡಿದಿದ್ದಾರೆ. ಇದೊಂದು ಅದ್ಭುತ, ಡಿಜಿಟಲ್ ಯುಗಕ್ಕೆ ಧನ್ಯವಾದ ಎಂದು ಸಹಸ್ರಾರು ಮಂದಿ ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ನಂತರ, ಆರು ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.