ಬೆಂಗಳೂರು: ರಾಜ್ಯದ ಎಲ್ಲಾ ಪಟ್ಟಣ ನಗರಗಳಲ್ಲಿ ನಿರ್ಮಾಣ ಮಾಡಿದ ಅನಧಿಕೃತ ಬಡಾವಣೆ ಮತ್ತು ಕಂದಾಯ ಭೂಮಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ಬಿಬಿಎಂಪಿ ಮಾದರಿಯಲ್ಲಿ ಬಿ-ಖಾತಾ ನೀಡಿ ತೆರಿಗೆ ವಸೂಲಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಈ ಸಂಬಂಧ ಸಚಿವ ಈಶ್ವರ್ ಖಂಡ್ರೆ ನೇತೃತ್ವದ ಸಂಪುಟ ಉಪ ಸಮಿತಿ ಶಿಫಾರಸುಗಳಿಗೆ ಸಂಪುಟ ಒಪ್ಪಿಗೆ ನೀಡಿದೆ. ಕಾನೂನಾತ್ಮಕವಾಗಿ ಶಿಫಾರಸುಗಳನ್ನು ಜಾರಿಗೆ ತರಲು ಬಿಬಿಎಂಪಿ ಕಾಯ್ದೆ 2020ರಲ್ಲಿರುವ ಅಂಶಗಳನ್ನು ರಾಜ್ಯದ ಉಳಿದ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಪುರಸಭೆ ಕಾಯ್ದೆ 1964ಕ್ಕೆ ತಿದ್ದುಪಡಿ ತರಬೇಕಿದೆ.
ಪ್ರಸ್ತುತ ನಗರ ಪುರಸಭೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷ ಆಸ್ತಿಗಳಿದ್ದು 34.35 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಾಗಿವೆ. ಇವುಗಳಿಗೆ ನೀರು, ರಸ್ತೆ, ವಿದ್ಯುತ್ ಸೇರಿ ಮೂಲಸೌಕರ್ಯ ಸ್ಥಳೀಯ ಸಂಸ್ಥೆಗಳ ಮೂಲಕ ಕಲ್ಪಿಸಿದ್ದರೂ ತೆರಿಗೆ ವಿಧಿಸಲು ಅವಕಾಶ ಇರಲಿಲ್ಲ. ಈಗ ಕಾಯ್ದೆಗಳಿಗೆ ತಿದ್ದುಪಡಿ ತಂದು ಅನಧಿಕೃತ ಆಸ್ತಿಗಳಿಗೆ ತೆರಿಗೆ ವಿಧಿಸಿದರೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಈಶ್ವರ್ ಖಂಡ್ರೆ ನೇತೃತ್ವದ ಸಮಿತಿ ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿದ ಬಡವರು, ಮಧ್ಯಮ ವರ್ಗದವರಿಗೆ ಹೊರೆ ಆಗದಂತೆ ತೆರಿಗೆ ನಿಗದಿ ಮಾಡಲು ಶಿಫಾರಸು ಮಾಡಿದ್ದು, ಇದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.