ಬೆಂಗಳೂರು: ಅನಧಿಕೃತ ಕಟ್ಟಡಗಳಿಗೂ ತೆರಿಗೆ ವಿಧಿಸುವ ಸಂಬಂಧ ರೂಪುರೇಷೆ ಸಿದ್ದಪಡಿಸಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳಿಂದಲೂ ತೆರಿಗೆ ಸಂಗ್ರಹಿಸಲು ರೂಪುರೇಷೆ ಸಿದ್ದಪಡಿಸಲು ಸಂಪುಟ ಉಪಸಮಿತಿ ರಚಿಸಲಾಗುವುದು.
ಸದ್ಯ ಬಿಬಿಎಂಪಿ ವ್ಯಾಪ್ತಿಯ ಅನಧಿಕೃತ ಬಡಾವಣೆಗಳಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ಅಕ್ರಮವಾಗಿ ನಿರ್ಮಾಣ ಮಾಡಲಾದ ಕಟ್ಟಡಗಳಿಂದಲೂ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ಉಳಿದ ಪಾಲಿಕೆ ಮತ್ತು ನಗರಸಭೆಗಳಿಗೂ ಅನ್ವಯಿಸಲು ಚಿಂತನೆ ನಡೆದಿದೆ.
ಇದಕ್ಕಾಗಿ ರೂಪರೇಷೆ ಸಿದ್ಧಪಡಿಸಲು ಸಂಪುಟ ಉಪಸಮಿತಿ ರಚಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸದ ಕಾರಣ ತೆರಿಗೆ ಪಾವತಿಸಲು ಆಸ್ತಿ ಮಾಲೀಕರು ಮುಂದಾಗುತ್ತಿಲ್ಲ. ಆದರೆ, ಅವರಿಗೆ ರಸ್ತೆ, ಒಳಚರಂಡಿ, ನೀರು, ವಿದ್ಯುತ್ ಒಳಗೊಂಡಂತೆ ಎಲ್ಲ ಮೂಲ ಸೌಕರ್ಯಗಳನ್ನು ನೀಡಲಾಗಿದೆ. ಹೀಗಾಗಿ ಸಾಧಕ ಬಾಧಕ ಪರಾಮರ್ಶಿಸಿ ಅನಧಿಕೃತ ಆಸ್ತಿಗಳಿಂದಲೂ ತೆರೆಗೆ ಸಂಗ್ರಹಿಸಲು ವಹಿಸಬೇಕಾದ ಕ್ರಮಗಳ ಕುರಿತು ಸಂಪುಟ ಉಪ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.