ಹೈದರಾಬಾದ್: ಶನಿವಾರ ಇಲ್ಲಿನ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಲೋಟಸ್ ಪಾಂಡ್ ನಿವಾಸದ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕೆಲವು ಕಟ್ಟಡಗಳನ್ನು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಜಿಹೆಚ್‌ಎಂಸಿ) ನೆಲಸಮಗೊಳಿಸಿದೆ.
ರೆಡ್ಡಿ ಅವರು ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ 10 ದಿನಗಳ ನಂತರ ನೆಲಸಮ ಕಾರ್ಯಗಳನ್ನು ನಡೆಸಲಾಯಿತು.
ಜಿಹೆಚ್‌ಎಂಸಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಜಗನ್ ಅವರ ನಿವಾಸದಲ್ಲಿ ಪಾದಚಾರಿ ಮಾರ್ಗದ ಮೇಲೆ ಟೈಲಿಂಗ್ ಕೆಲಸ ಮಾಡಲು ನಾಗರಿಕ ಅಧಿಕಾರಿಗಳು ಕಾಂಪೌಂಡ್ ಗೋಡೆಗೆ ತಾಗಿಕೊಂಡಿರುವ ರಚನೆಗಳನ್ನು ತೆಗೆದುಹಾಕಿದ್ದಾರೆ. ಈ ಕಟ್ಟಡಗಳನ್ನು ಭದ್ರತಾ ಸಿಬ್ಬಂದಿ ಬಳಸುತ್ತಿದ್ದರು.
ಫುಟ್‌ಪಾತ್ ಕಾಮಗಾರಿ ಕೈಗೊಳ್ಳಲು ಆರು ತಿಂಗಳ ಹಿಂದೆಯೇ ಕಟ್ಟಡಗಳನ್ನು ತೆಗೆಯುವಂತೆ ಜಗನ್ ಅವರ ನಿವಾಸದಲ್ಲಿ ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ ಎಂದು ಜಿಹೆಚ್‌ಎಂಸಿಯ ನಗರ ಯೋಜನಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫುಟ್‌ಪಾತ್ ಕಾಮಗಾರಿಗೆ ಅನುಕೂಲವಾಗುವಂತೆ ಕಟ್ಟಡಗಳನ್ನು ತೆಗೆಯುವಂತೆ ನಾವು ಅವರಿಗೆ ಹೇಳುತ್ತಲೇ ಬಂದಿದ್ದೇವೆ. ಫುಟ್‌ಪಾತ್ ಅತಿಕ್ರಮಣ ಮಾಡಿರುವುದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ ಎಂದು ಕಾಲೊನಿ ನಿವಾಸಿಗಳು ದೂರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.