ಹೈದರಾಬಾದ್: ಪ್ರಿಯಕರನ ಸಾವಿನಿಂದ ಮನನೊಂದು ಪಂಜಾಬ್ ಯುವತಿಯೊಬ್ಬರು ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಚ್ಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ನಾನಕ್ರಮ್ ಗುಡದಲ್ಲಿ ತಂಗಿದ್ದ ಹಾಸ್ಟೆಲ್‌ನಲ್ಲಿ ನೇಹಾ(19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರ ಪ್ರಕಾರ ಆಕೆ ಬೇಕರಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಜೊತೆಗೆ ಸ್ನೇಹಿತಳಾಗಿದ್ದಳು. ಅವರು ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ಬಯಸಿದ್ದರು. ಇವರಿಬ್ಬರ ಪ್ರೀತಿಯ ವಿಚಾರ ತಿಳಿದ ಬೇಕರಿ ಆಡಳಿತ ಮಂಡಳಿ ಸಲ್ಮಾನ್ ರನ್ನು ಕೆಲಸದಿಂದ ವಜಾಗೊಳಿಸಿತ್ತು. ನೇಹಾಳನ್ನು ಮದುವೆಯಾಗುವ ಪ್ರಸ್ತಾಪಕ್ಕೆ ಆತನ ಪೋಷಕರು ಕೂಡ ವಿರೋಧಿಸಿದ್ದರು.
ಬಾಳಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟಾಪುರಂ ನಿವಾಸಿ ಸಲ್ಮಾನ್ ಇದರಿಂದ ಮನನೊಂದಿದ್ದು, ಅಕ್ಟೋಬರ್ 1 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಲ್ಮಾನ್ ಆತ್ಮಹತ್ಯೆ ಬಗ್ಗೆ ತಿಳಿದ ನೇಹಾ ಆಘಾತಕ್ಕೊಳಗಾಗಿದ್ದಾರೆ.
ಮಂಗಳವಾರ, ಹಾಸ್ಟೆಲ್ ನಲ್ಲಿದ್ದ ನೇಹಾ ಅವರ ರೂಮ್ ಮೇಟ್ ಗಳು ತಮ್ಮ ಕೆಲಸಕ್ಕೆ ತೆರಳಿದಾಗ, ಕೋಣೆಗೆ ಒಳಗಿನಿಂದ ಬೀಗ ಹಾಕಿದ್ದಾಳೆ. ಕೊಠಡಿಯನ್ನು ಸ್ವಚ್ಛಗೊಳಿಸಲು ಹಾಸ್ಟೆಲ್ ಸಿಬ್ಬಂದಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಿಟಕಿಯಿಂದ ಇಣುಕಿ ನೋಡಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ.
ಹಾಸ್ಟೆಲ್ ಆಡಳಿತ ಮಂಡಳಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಚ್ಚಿಬೌಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.