
ಕಲಾವಿದನ ಕಣ್ಣಿಗೆ ಎಲ್ಲವೂ ಕಲೆಯಾಗಿಯೇ ಕಾಣಿಸುತ್ತದೆ. ಚಿಕ್ಕದೊಂದು ವಸ್ತು ಸಿಕ್ಕರೂ ಅದಕ್ಕೆ ಸುಂದರ ರೂಪ ಕೊಡುವಲ್ಲಿ ಕೆಲವರು ನಿಸ್ಸೀಮರು. ಅಂಥದ್ದೇ ಒಂದು ಕಲಾವಿದನ ಕೈಯಿಂದ ಮೂಡಿಬಂದ ಚಿತ್ರಣ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮರ-ಗಿಡಗಳ ಎಲೆಗೆ ಜೀವ ತುಂಬಿದ್ದಾನೆ ಈ ಕಲಾವಿದ. ಆರ್ಟ್ ಗ್ಯಾಲರಿ ಎಂಬ ಹೆಸರಿನ ಖಾತೆಯಿಂದ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ 32-ಸೆಕೆಂಡ್ಗಳ ಈ ಕ್ಲಿಪ್ಪಿಂಗ್, ನೋಡುಗರ ಕಣ್ಮನ ಸೆಳೆಯುತ್ತದೆ. ಕಲಾವಿದನು ಇಲ್ಲಿ ವಿವಿಧ ಬಣ್ಣಗಳ ಮತ್ತು ಆಕಾರಗಳ ಎಲೆಗಳನ್ನು ಕತ್ತರಿಸಿ ಅದಕ್ಕೆ ಸುಂದರ ರೂಪ ನೀಡುವುದನ್ನು ನೋಡಬಹುದಾಗಿದೆ.
ಮತ್ಸ್ಯಕನ್ಯೆಯ ನಯನ ಮನೋಹರ ಚಿತ್ರವು ಕ್ಷಣ ಮಾತ್ರದಲ್ಲಿ ಎಲೆಯಲ್ಲಿ ಮೂಡಿದೆ. ಈಕೆಯ ಕೂದಲು, ಉಡುಗೆ ಮತ್ತು ಬಾಲ ಎಲ್ಲವೂ ಎಲೆಯಲ್ಲಿಯೇ ರೂಪು ಪಡೆಯುತ್ತಾ ಸಾಗುತ್ತದೆ. ಅದೇ ರೀತಿ ಸುರಸುಂದರಿಯೊಬ್ಬಳ ಚಿತ್ರಣವನ್ನು ಎಲೆಗಳ ಮೂಲಕವೇ ರಚಿಸಿದ್ದಾನೆ ಕಲಾವಿದ.
ಈ ಎರಡು ಕಲಾಕೃತಿಗಳನ್ನು ಕಂಡು ನೆಟ್ಟಿಗರು ಮನಸಾರೆ ಕೊಂಡಾಡುತ್ತಿರುವುದು ಮಾತ್ರವಲ್ಲದೇ ಸಹಸ್ರಾರು ಕಮೆಂಟ್ಗಳ ಮೂಲಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.