ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಸಹಾಯಕನಾಗಿದ್ದ ಉಮೇಶ್ ಮನೆ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಅನ್ಯ ಸೇವೆ ನಿಯೋಜನೆಯನ್ನು ಬಿಎಂಟಿಸಿ ಹಿಂಪಡೆದುಕೊಂಡಿದೆ.
ಸಿಎಂ ಕಚೇರಿಯಿಂದ ಬಿಡುಗಡೆಗೊಳಿಸುವಂತೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ನಿಯೋಜನೆ ಆದೇಶವನ್ನು ಹಿಂಪಡೆಯಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಪ್ತ ಸಹಾಯಕನಾಗಿದ್ದ ಉಮೇಶ್ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಸಿಎಂ ಕಚೇರಿಯಲ್ಲಿ ಸಹಾಯಕರಾಗಿ ನಿಯೋಜನೆಗೊಂಡಿದ್ದರು. ಅವರನ್ನು ಮಾತೃ ಇಲಾಖೆಗೆ ವಾಪಸ್ ಕರೆಸಿಕೊಳ್ಳಲಾಗಿದೆ.
ಬಿಎಂಟಿಸಿಯಲ್ಲಿ ಬಸ್ ಚಾಲಕನಾಗಿದ್ದ ಉಮೇಶ್ ಎರವಲು ಸೇವೆ ಮೇರೆಗೆ ಯಡಿಯೂರಪ್ಪ ಆಪ್ತ ಸಹಾಯಕರಾಗಿದ್ದರು. ನೋಡನೋಡುತ್ತಿದ್ದಂತೆ ಕೋಟ್ಯಧೀಶನಾದ ಉಮೇಶ್, ನೆಲಮಂಗಲ ಶಿವಮೊಗ್ಗ ಜಿಲ್ಲೆ ಆಯನೂರಿನಲ್ಲಿ ಕೃಷಿ ಜಮೀನು, ಬೆಂಗಳೂರಿನಲ್ಲಿ ಬಂಗಲೆ, ನಿವೇಶನಗಳನ್ನು ಹೊಂದಿದ್ದಾರೆ. ನೀರಾವರಿ ಇಲಾಖೆಗಳ ಗುತ್ತಿಗೆ ವ್ಯವಹಾರಗಳಲ್ಲಿ ಪಾತ್ರ ವಹಿಸಿದ್ದರು. ಅಕ್ರಮ ಸಂಪಾದನೆ, ತೆರಿಗೆ ವಂಚನೆ ಹಿನ್ನಲೆಯಲ್ಲಿ ಐಟಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ನಿನ್ನೆ ದಾಳಿ ಸಂದರ್ಭದಲ್ಲಿ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು ದೊರೆತ ಮಾಹಿತಿ ಆಧರಿಸಿ ವಿಚಾರಣೆಗೆ ಬರುವಂತೆ ಉಮೇಶ್ ಗೆ ನೋಟಿಸ್ ನೀಡಿದ್ದು, ಇಂದು ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸತತ 24 ಗಂಟೆಗಳ ನಂತರವೂ ಪರಿಶೀಲನೆ ಮುಂದುವರೆದಿದ್ದು, ಮಹತ್ವದ ದಾಖಲೆ ವಶಕ್ಕೆ ಪಡೆಯಲಾಗಿದೆ. ನೀರಾವರಿ ಇಲಾಖೆಗೆ ಸಂಬಂಧಿಸಿದ ಮಹತ್ವದ ಕಡತಗಳು ದೊರೆತಿವೆ ಎನ್ನಲಾಗಿದೆ.