ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಅಪ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಕರೆತರುತ್ತಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.
ಕಾಬೂಲ್ ಏರ್ ಪೋರ್ಟ್ ನಿಂದ 83 ಪ್ರಜೆಗಳನ್ನು ಹೊತ್ತು ಕರೆತರುತ್ತಿದ್ದ ವೇಳೆ ಯಾರೋ ಅಪರಿಚಿತರು ನಮ್ಮ ದೇಶದ ವಿಮಾನ ಅಪಹರಿಸಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಯವ್ಗೆನಿ ಯೆನ್ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ನಮ್ಮ ದೇಶದ ಪ್ರಜೆಗಳ ಬದಲಿಗೆ ಬೇರೆ ದೇಶದ ಪ್ರಜೆಗಳನ್ನು ತುಂಬಿ ಇರಾನ್ ನತ್ತ ಹಾರಾಟ ನಡೆಸಿದ್ದಾರೆ. ಹಾಗಾಗಿ ಮೂರು ಬಾರಿ ನಮ್ಮ ಸ್ಥಳಾಂತರ ಮಿಷನ್ ಯಶಸ್ವಿಯಾಗಿಲ್ಲ, ನಮ್ಮ ದೇಶದ ಪ್ರಜೆಗಳನ್ನು ಕರೆತರಲು ಸಾಧ್ಯವಾಗಿಲ್ಲ ಎಂದು ಉಕ್ರೇನ್ ತಿಳಿಸಿದೆ.
ಆದರೆ ಉಕ್ರೇನ್ ವಿಮಾನ ಅಪಹರಣವನ್ನು ಅಲ್ಲಗಳೆದಿರುವ ಇರಾನ್, ವಿಮಾನದ ಇಂಧನ ಖಾಲಿಯಾಗಿತ್ತು. ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಇರಾನ್ ನಲ್ಲಿ ಇಳಿದಿತ್ತು. ಇಂಧನ ತುಂಬಿಸಿಕೊಂಡು ಈಗ ಉಕ್ರೇನ್ ನತ್ತ ಹೊರಟಿದೆ ಎಂದು ಇರಾನ್ ತಿಳಿಸಿದೆ.