
ಕೈವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ. ರಾಜಧಾನಿ ಕೈವ್ ನಗರದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಝೆಲೆನ್ಸ್ಕಿ ಕಾರ್ ಮತ್ತು ಬೆಂಗಾವಲು ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಅಪಘಾತದಲ್ಲಿ ಝೆಲೆನ್ಸ್ಕಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿಲ್ಲ ಎಂದು ಹೇಳಲಾಗಿದೆ.
ಝೆಲೆನ್ಸ್ಕಿ ಅವರ ವಾಹನವು ಕೈವ್ ಮೂಲಕ ಹಾದು ಹೋಗುತ್ತಿದ್ದಾಗ ವಾಹನ ಚಾಲಕನೊಬ್ಬ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಅಧ್ಯಕ್ಷರು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅವರ ವಕ್ತಾರ ಸೆರ್ಗಿ ನಿಕಿಫೊರೊವ್ ಗುರುವಾರ ಮುಂಜಾನೆ ತಿಳಿಸಿದ್ದಾರೆ.
ಅಧ್ಯಕ್ಷರ ಜೊತೆಗಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ಚಾಲಕ ಸೇರಿ ಇತರರಿಗೂ ವೈದ್ಯರು ತುರ್ತು ಸಹಾಯ ಒದಗಿಸಿ ಅವರನ್ನು ಆಸ್ಪತ್ರೆಗೆ ಕಳಿಸಿದ್ದಾರೆ. ಅಧ್ಯಕ್ಷರನ್ನು ವೈದ್ಯರು ಪರೀಕ್ಷಿಸಿದ್ದಾರೆ, ಯಾವುದೇ ಗಂಭೀರ ಗಾಯಗಳು ಪತ್ತೆಯಾಗಿಲ್ಲ. ಕಾನೂನು ಜಾರಿ ಅಧಿಕಾರಿಗಳು ಅಪಘಾತದ ಎಲ್ಲಾ ಸಂದರ್ಭಗಳನ್ನು ತನಿಖೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಅಪಘಾತಕ್ಕಿಂತ ಮೊದಲು ಭಾಷಣ ಮಾಡಿದ್ದ ಝೆಲೆನ್ಸ್ಕಿ ನಮ್ಮ ಪಡೆಗಳು ರಷ್ಯಾ ಸೇನೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ ಎಂದು ಹೇಳಿದ್ದರು.