ರಷ್ಯಾ- ಉಕ್ರೇನ್ ಯುದ್ಧದ ಸಮಯದಲ್ಲಿ ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪೂರ್ಣಗೊಳಿಸಲು ಒಂದು ಬಾರಿ ಅವಕಾಶ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಅಸ್ತಿತ್ವದಲ್ಲಿರುವ ಯಾವುದೇ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗದೆ, ಭಾಗ I ಮತ್ತು ಭಾಗ II ಎರಡೂ ಪರೀಕ್ಷೆಗಳನ್ನು (ಥಿಯರಿ ಮತ್ತು ಪ್ರಾಯೋಗಿಕ) ಎಂಬಿಬಿಎಸ್ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಒಂದೇ ಅವಕಾಶವನ್ನು ನೀಡಲಾಗುವುದು ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇಂದ್ರದ ಪ್ರಕಾರ, ಈ ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ, ವಿದ್ಯಾರ್ಥಿಗಳು ಎರಡು ವರ್ಷಗಳ ಕಡ್ಡಾಯ ರೋಟರಿ ಇಂಟರ್ನ್‌ಶಿಪ್ ಅನ್ನು ಪೂರ್ಣಗೊಳಿಸಬೇಕು. ಹಿಂದಿನ ಪ್ರಕರಣಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿರ್ಧರಿಸಿದಂತೆ ಮೊದಲ ವರ್ಷ ಉಚಿತ ಮತ್ತು ಎರಡನೇ ವರ್ಷ ಹಣ ಪಾವತಿಸಬೇಕಾಗುತ್ತದೆ.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ರಚಿಸಿದ್ದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಕಟ್ಟುನಿಟ್ಟಾಗಿ ಒಂದು ಬಾರಿಯ ಆಯ್ಕೆಯಾಗಿದೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ನಿರ್ಧಾರಗಳಿಗೆ ಆಧಾರವಾಗುವುದಿಲ್ಲ ಎಂದು ಸಮಿತಿಯು ಒತ್ತಿ ಹೇಳಿದೆ.
ಅಸ್ತಿತ್ವದಲ್ಲಿರುವ ಯಾವುದೇ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗದೆ MBBS ಪರೀಕ್ಷೆಗಳನ್ನು ಪೂರ್ಣಗೊಳಿಸಲು ಒಂದು ಬಾರಿ ಅವಕಾಶವನ್ನು ನೀಡುವ ಕೇಂದ್ರದ ನಿರ್ಧಾರವು ಈ ವಿದ್ಯಾರ್ಥಿಗಳಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುವ ನಿರೀಕ್ಷೆಯಿದೆ.
ಕಳೆದ ವರ್ಷ ಸುಮಾರು 18,000 ವಿದ್ಯಾರ್ಥಿಗಳು ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತಕ್ಕೆ ಹಿಂತಿರುಗಿದ್ದರು ಮತ್ತು ಅನೇಕರು ತಮ್ಮ ಸ್ವಂತ ದೇಶದಲ್ಲಿ ತಮ್ಮ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ.