ಉಕ್ರೇನ್ ಮೇಲಿನ ಮಾಸ್ಕೋದ ಆಕ್ರಮಣವನ್ನು ಸಮರ್ಥಿಸಲು ಸುಳ್ಳು ವರದಿಗಳನ್ನು ತಯಾರಿಸುವ ಮೂಲಕ ರಷ್ಯಾದ ಗುಪ್ತಚರ ಸಂಸ್ಥೆಗಳೊಂದಿಗೆ ಸಹಕರಿಸಿದ್ದಕ್ಕಾಗಿ ಉಕ್ರೇನಿಯನ್ ನ್ಯಾಯಾಲಯವು ಶುಕ್ರವಾರದಂದು ಮಹಿಳೆಯೊಬ್ಬರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಫೆಬ್ರವರಿ 2022 ರ ಆಕ್ರಮಣದ ನಂತರ, ರಷ್ಯಾದೊಂದಿಗೆ ಸಹಕರಿಸಲು ಹಲವರ ಸಹಕಾರವನ್ನು ಈ ಮಹಿಳೆ ಪಡೆದುಕೊಂಡಿದ್ದರು ಎನ್ನಲಾಗಿದ್ದು, ಹೆಚ್ಚುವರಿಯಾಗಿ ಉಕ್ರೇನ್ ಬೇಹುಗಾರಿಕೆ ಅಥವಾ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುವ ಚಟುವಟಿಕೆಗಳ ಆರೋಪದ ಮೇಲೆ ಕೆಲ ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಮಹಿಳೆಯನ್ನು ಹೆಸರಿಸದ ಪ್ರಾಸಿಕ್ಯೂಟರ್‌ಗಳು, ಆಕೆ ಮಾನವ ಹಕ್ಕುಗಳ ಎನ್‌ಜಿಒ ಮುಖ್ಯಸ್ಥೆ ಮತ್ತು ದೇಶದ್ರೋಹದ ಅಪರಾಧಿ ಎಂದು ಹೇಳಿದ್ದಾರೆ. ಆಕೆ ರಷ್ಯಾದ ಕ್ಯುರೇಟರ್‌ಗಳಿಂದ ನಿಯೋಜನೆಯನ್ನು ಸ್ವೀಕರಿಸಿದ್ದು, ರಷ್ಯಾದ ಮಿಲಿಟರಿ ಆಕ್ರಮಣಕ್ಕೆ ಸಮರ್ಥನೆಯನ್ನು ಬೆಂಬಲಿಸುವ ಉದ್ದೇಶದಿಂದ ಪೋಸ್ಟ್ ಬರೆಯುತ್ತಿದ್ದರು ಎಂದಿದ್ದಾರೆ.
“ಉಕ್ರೇನ್‌ನಲ್ಲಿ ರಷ್ಯಾದ ಒಕ್ಕೂಟದ ವಿಶೇಷ ಕಾರ್ಯಾಚರಣೆ ಎಂಬ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕೃತವಾಗಿ ‘ರಷ್ಯನ್ನರನ್ನು ಕೊಲ್ಲಲು’ ಕರೆ ನೀಡುತ್ತಿದ್ದಾರೆ ಎಂದು ಈ ಮಹಿಳೆ ಬರೆದಿದ್ದು, ಇದನ್ನು ವಿಶ್ವಸಂಸ್ಥೆಯಲ್ಲಿ ರಷ್ಯಾದ ಖಾಯಂ ಪ್ರತಿನಿಧಿಯಾದ ವಾಸಿಲಿ ನೆಬೆಂಜ್ಯಾ ಅವರು ಮಾಸ್ಕೋ ಆಕ್ರಮಣದ ಸಮರ್ಥನೆಯ ಭಾಗವಾಗಿ ಓದಿದ್ದರು.