ರಷ್ಯಾ ದಾಳಿಯಿಂದಾಗಿ ಯುದ್ಧಭೂಮಿಯಾಗಿರುವ ಉಕ್ರೇನ್‌ನಿಂದ ಲಕ್ಷಾಂತರ ಜನ ಪಲಾಯನ ಮಾಡುತ್ತಿದ್ದು, ಮಹಿಳೆಯರು, ಮಕ್ಕಳ ಪಾಡಂತೂ ಹೇಳತೀರದಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೇ ಉಕ್ರೇನ್‌ನ ದಿಟ್ಟ ಬಾಲಕನೊಬ್ಬ ಏಕಾಂಗಿಯಾಗಿ 1,100 ಕಿ.ಮೀ. ಸಂಚರಿಸಿದ್ದಾನೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಹೌದು, ಉಕ್ರೇನ್‌ನ ಜಪೋರಿಝಿಯಾ ನಗರದವನಾದ 11 ವರ್ಷದ ಬಾಲಕ ಹಸನ್, ರಷ್ಯಾ ಪಡೆಗಳ ರಾಕೆಟ್ ದಾಳಿಯಿಂದ ಕಂಗೆಟ್ಟು, ತನ್ನ ತಾಯಿಯ ಸಂದೇಶ ಹಾಗೂ ಮೊಬೈಲ್ ನಂಬರ್ ಇರುವ ಚೀಟಿಯೊಂದನ್ನು ಹಿಡಿದುಕೊಂಡು, ಹೆಗಲಿಗೊಂದು ಪುಟ್ಟ ಬ್ಯಾಗ್ ಹಾಕಿಕೊಂಡು ರೈಲು ಸೇರಿ ಹಲವು ಮಾರ್ಗಗಳ ಮೂಲಕ ಆತ ಸ್ಲೊವಾಕಿಯಾ ದೇಶವನ್ನು ತಲುಪಿದ್ದಾನೆ. ಬಾಲಕನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಲಕ್ಷಾಂತರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಪೋರಿಝಿಯಾದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಇತ್ತೀಚೆಗೆ ರಷ್ಯಾ ಪಡೆಗಳು ದಾಳಿ ಮಾಡಿದ್ದು, ಇದರಿಂದ ಭೀತಿಗೊಳಗಾದ ಹಸನ್ ತಾಯಿಯು ಮಗನಿಗೆ ಚೀಟಿ ಕೊಟ್ಟು, ಬ್ಯಾಗ್ ಕೊಟ್ಟು ದೇಶ ಬಿಟ್ಟು ಹೋಗುವಂತೆ ಕಳುಹಿಸಿದ್ದಾರೆ. ಆಕೆಗೆ ನಡೆಯಲು ಆಗದ ಕಾರಣ ತಾನು ಜಪೋರಿಝಿಯಾದಲ್ಲಿಯೇ ಉಳಿದಿದ್ದಾಳೆ. ಮಗನು ಹೊರಟಿರುವ ಕುರಿತು ವಿಡಿಯೋ ಮಾಡಿದ ಆಕೆ, ರಕ್ಷಿಸುವಂತೆ ಸ್ಲೊವಾಕಿಯಾ ಸರಕಾರವನ್ನು ಮನವಿ ಮಾಡಿದ್ದಾಳೆ.
ಬಾಲಕನೀಗ ಸ್ಲೊವಾಕಿಯಾ ತಲುಪಿದ್ದು, ಪೊಲೀಸರು ಆತನಿಗೆ ಊಟ, ವಸತಿಗೆ ವ್ಯವಸ್ಥೆ ಮಾಡಿದ್ದಾರೆ. ಈತನನ್ನು ಹೀರೊ ಎಂದು ಸಹ ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ಸಮರಗ್ರಸ್ತ ಉಕ್ರೇನ್‌ನಿಂದ ಬದುಕಿ ಬರುತ್ತಿರುವವರು ಒಂದಲ್ಲ ಒಂದು ರೀತಿಯ ಕಷ್ಟ ಅನುಭವಿಸುತ್ತಿದ್ದು, ಮಕ್ಕಳು ಸಹ ಹೀಗೆ ಪರದಾಡುತ್ತಿರುವುದು ಎಂತಹವರ ಮನಸ್ಸನ್ನೂ ಬೇಸರದ ಮಡುವಿನಲ್ಲಿ ಮುಳುಗಿಸುತ್ತದೆ.