ತಿರುಪತಿ: ಶಾಲೆಗೆ ತೆರಳುವ ಮಾರ್ಗದಲ್ಲಿ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಆರು ವರ್ಷದ ಯುಕೆಜಿ ವಿದ್ಯಾರ್ಥಿ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವಿಚಿತ್ರ ಘಟನೆ ನಡೆದಿದೆ.
ಚಿತ್ತೂರು ಜಿಲ್ಲೆಯ ಪಲಮನೇರ್‌ನಲ್ಲಿ ಗುರುವಾರ ಈ ಘಟನೆ ನಡೆದಿದ್ದರೂ, ಬಾಲಕ ಪೊಲೀಸರೊಂದಿಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಶನಿವಾರ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ, ಆದರ್ಶ ಶಾಲೆಯ ವಿದ್ಯಾರ್ಥಿ ಕಾರ್ತಿಕ್ ಎಂದು ಗುರುತಿಸಲಾದ ಬಾಲಕ ಈ ಪ್ರದೇಶದಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ತನ್ನ ಶಾಲೆಗೆ ಹೋಗುವ ಮಾರ್ಗವನ್ನು ಟ್ರ್ಯಾಕ್ಟರ್ ಗಳು ನಿರ್ಬಂಧಿಸಿ ಅಡ್ಡಿಪಡಿಸುತ್ತಿವೆ ಎಂದು ಪೊಲೀಸರಿಗೆ ದೂರು ನೀಡುತ್ತಿರುವುದು ಕಂಡುಬಂದಿದೆ.
ವಿದ್ಯಾರ್ಥಿಗಳು ತಮ್ಮ ಶಾಲೆಗೆ ತೆರಳಲು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದು, ಟ್ರಾಫಿಕ್ ಸಮಸ್ಯೆ ನಿವಾರಿಸುವಂತೆ ಪಲಮನೇರ್ ಸರ್ಕಲ್ ಇನ್ಸ್ ಪೆಕ್ಟರ್ ಎನ್. ಭಾಸ್ಕರ್ ಅವರನ್ನು ಬಾಲಕ ಕೇಳಿಕೊಂಡಿದ್ದಾನೆ.
ಭಾಸ್ಕರ್ ಅವರು ಬಾಲಕ ಕಾರ್ತಿಕ್ ಗೆ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಅವರ ಸಂಪರ್ಕ ಸಂಖ್ಯೆಯನ್ನು ಕೂಡ ನೀಡಿ, ಏನಾದರೂ ಸಮಸ್ಯೆಗಳಿದ್ದರೆ ಯಾವುದೇ ಸಮಯದಲ್ಲಿ ಕರೆ ಮಾಡಲು ತಿಳಿಸಿದ್ದಾರೆ.
ಶಾಲಾ ಆವರಣದಲ್ಲಿ ಡ್ರೈನೇಜ್ ಬ್ಲಾಕ್ ಇರುವುದರಿಂದ ಕಾಮಗಾರಿ ನಡೆಯುತ್ತಿದ್ದು, ಆಗಾಗ ಆಗುವ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಲು ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ ಎಂದು ಭಾಸ್ಕರ್ ತಿಳಿಸಿದ್ದಾರೆ.
ಇದು ಅತ್ಯಂತ ಜನನಿಬಿಡ ಜಂಕ್ಷನ್ ಆಗಿದ್ದು, ಒಳಚರಂಡಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ವಾಹನಗಳ ಸಂಚಾರ ನಿಯಂತ್ರಿಸಲು ಬ್ಯಾರಿಕೇಡ್ ಗಳನ್ನು ಹಾಕಿರುವುದರಿಂದ ಸ್ವಲ್ಪ ತೊಂದರೆಯಾಯಿತು. ಆರು ವರ್ಷದ ಬಾಲಕ ತನ್ನ ತಂದೆಯೊಂದಿಗೆ ಯಾವುದೇ ಭಯವಿಲ್ಲದೆ ಪೊಲೀಸ್ ಠಾಣೆಗೆ ಬಂದು ಟ್ರಾಫಿಕ್ ಸಮಸ್ಯೆಯ ಬಗ್ಗೆ ದೂರು ನೀಡಿರುವುದು ನಮಗೆ ಆಶ್ಚರ್ಯ ತಂದಿದೆ. ಆದಷ್ಟು ಬೇಗ ಟ್ರಾಫಿಕ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದೇವೆ ಎಂದು ಇನ್ಸ್ ಪೆಕ್ಟರ್ ಭಾಸ್ಕರ್ ಹೇಳಿದ್ದಾರೆ.