ಇಂಗ್ಲೆಂಡ್ನ ಲೀಡ್ಸ್ ನಿವಾಸಿಯಾಗಿರುವ 27 ವರ್ಷದ ಯುವತಿಯು ವಿಚಿತ್ರವಾದ ಕಾಯಿಲೆಯೊಂದರಿಂದ ಬಳಲುತ್ತಿದ್ದು ಇದರಿಂದ ಸಾಕಷ್ಟು ನೋವನ್ನು ಅನುಭವಿಸುವಂತಾಗಿದೆ. ಗ್ಯಾಸ್ಟ್ರೋಪ್ಯಾರೆಸಿಸ್ ಎಂಬ ಕಾಯಿಲೆ ಇದಾಗಿದ್ದು ಪರಿಣಾಮವಾಗಿ ಯುವತಿಯು ದಿನಕ್ಕೆ 30 ಬಾರಿ ವಾಂತಿ ಮಾಡುತ್ತಿದ್ದಾಳೆ..!
2016ರಲ್ಲಿ ಎಮಿಲಿ ವೆಬ್ಸ್ಟರ್ ಅನಾರೋಗ್ಯಕ್ಕೀಡಾಗಿದ್ದರು. ಇದಾದ ಬಳಿಕ ಅವರ ಜೀವನ ಸಂಪೂರ್ಣವಾಗಿ ಬದಲಾಗಿ ಹೋಯ್ತು. ಎಮಿಲಿ ಕಳೆದ ಐದು ವರ್ಷಗಳಿಂದ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.
ವೈದ್ಯರು ಮೊದಲ ಇದನ್ನು ಸಾಮಾನ್ಯ ಕಾಯಿಲೆ ಎಂದು ಹೇಳಿದ್ದರು. ಆದರೆ ಬಳಿಕ ಇದೊಂದು ಗುಣಪಡಿಸಲಾಗದಂತಹ ಸ್ಥಿತಿ ಎಂಬುದು ತಿಳಿದುಬಂತು ಎಂದು ಎಮಿಲಿ ಹೇಳಿದ್ದಾರೆ.
ವರದಿಗಳ ಪ್ರಕಾರ ಬ್ರಿಟನ್ನಲ್ಲಿ ಆರು ಪ್ರತಿಶತ ಜನಸಂಖ್ಯೆ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದೆ. ಇದೊಂದು ಅತ್ಯಂತ ವಿರಳ ಪ್ರಕರಣವಾಗಿದ್ದು ಹೊಟ್ಟೆ ಭಾಗವು ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿರುತ್ತದೆ. ಹೀಗಾಗಿ ಸಾಮಾನ್ಯ ಸ್ಥಿತಿಯಲ್ಲಿ ಆಹಾರವನ್ನು ಕರಗಿಸಿ ಹೊಟ್ಟೆ ಖಾಲಿ ಮಾಡಲು ಸಾಧ್ಯವಾಗೋದಿಲ್ಲ.
ಕಳೆದ ಕೆಲ ವರ್ಷಗಳ ಕಾಲ ಆಸ್ಪತ್ರೆಯಲ್ಲೇ ಜೀವನ ಸಾಗಿಸಿದ್ದ ಈಕೆ ನವೆಂಬರ್ 11ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈಕೆಯ ದೇಹಕ್ಕೆ ಗ್ಯಾಸ್ಟ್ರಿಕ್ಪೇಸ್ಮೇಕರ್ ಅಳವಡಿಸಲಾಗುತ್ತದೆ. ಬಳಿಕ ಅವರ ಜೀರ್ಣಾಂಗ ವ್ಯವಸ್ಥೆ ಸುಧಾರಿಸಲಿದೆ ಎನ್ನಲಾಗಿದೆ. ಅಂದಹಾಗೆ ಈ ಸರ್ಜರಿಯ ವೆಚ್ಚ ಬರೋಬ್ಬರಿ 9 ಲಕ್ಷ ರೂಪಾಯಿ ಆಗಿದೆ. ಎಮಿಲಿ ತನ್ನ ಶಸ್ತ್ರಚಿಕಿತ್ಸೆಗೆ ದೇಣಿಗೆ ಮೂಲಕ ಹಣ ಸಂಗ್ರಹಿಸಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಎಮಿಲಿ ಈ ಶಸ್ತ್ರಚಿಕಿತ್ಸೆಯು ನನ್ನ ಪಾಲಿಗೆ ಕ್ರಿಸ್ಮಸ್ ಉಡುಗೊರೆಯಾಗಲಿದೆ ಎಂದು ಭಾವಿಸಿದ್ದೇನೆ. ಕಳೆದ ಅನೇಕ ದಿನಗಳಿಂದ ನಾವು ಜೀವನದ ಅನೇಕ ಅಮೂಲ್ಯ ಕ್ಷಣಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನನಗೆ ಸ್ನೇಹಿತರ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹಬ್ಬವನ್ನು ಆಚರಿಸಲು ಆಗುತ್ತಿರಲಿಲ್ಲ ಎಂದು ಹಳೆಯ ದಿನಗಳನ್ನು ನೆನೆದರು.