ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನಲ್ಲಿರುವ ಮಹಿಳೆಯೊಬ್ಬಳು ತನ್ನ ನೆರೆಹೊರೆಯವರ ತೋಟದಲ್ಲಿ ಸುಮಾರು 4 ಅಡಿ ಉದ್ದದ ಮೊಸಳೆಯನ್ನು ನೋಡಿ ಆಘಾತಕ್ಕೊಳಗಾಗಿದ್ದಾಳೆ.
ವರದಿ ಪ್ರಕಾರ, ತಮ್ಮ ನೆರೆಹೊರೆಯವರ ಕೈ ತೋಟದಲ್ಲಿ ಮೊಸಳೆ ನೋಡಿದ ಸಾರಾ ಜೇನ್ ಎಲ್ಲಿಸ್ ಕೂಡಲೇ ಫೋಟೋ ಕ್ಲಿಕ್ಕಿಸಿದ್ದಾರೆ. ಆ ಜೀವಿಯನ್ನು ಸೂಕ್ಷ್ಮವಾಗಿ ಗಮನಿಸಿದ ಸಾರಾ ಅದು ನೈಜವಾದದ್ದೇ ಅನ್ನೋದನ್ನು ಕಂಡುಕೊಂಡಿದ್ದಾಳೆ. ಮೊಸಳೆ ಸುಮಾರು 4 ಅಡಿ ಉದ್ದವಿತ್ತು ಎಂಬುದಾಗಿ ಹೇಳಿದ್ದಾಳೆ.
ಈ ಸಂಬಂಧ ಮಾತನಾಡಿದ ಸಾರಾ, ಮೊಸಳೆಯನ್ನು ನೋಡಿದಾಗ ಅದು ಚಲಿಸುತ್ತಿರಲಿಲ್ಲಲ್ಲ. ಆದರೆ, ಒಂದೆರಡು ಗಂಟೆಗಳ ನಂತರ ಅದು ಕಣ್ಮರೆಯಾಯಿತು ಎಂದು ಹೇಳಿದ್ದಾರೆ. ಕೂಡಲೇ ತನ್ನ ಅತ್ತಿಗೆಗೆ ಈ ವಿಚಾರವನ್ನು ತಿಳಿಸಿದ್ದಾಳೆ. ಮೊದಲಿಗೆ ಆಕೆ ನಂಬದಿದ್ದರೂ ಫೋಟೋ ನೋಡಿದ ಬಳಿಕ ದಿಗ್ಭ್ರಾಂತರಾಗಿದ್ದಾರೆ.
ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಸರೀಸೃಪವನ್ನು ನೋಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಯಾರ್ಕ್‌ಶೈರ್‌ನ ವನ್ಯಜೀವಿ ಛಾಯಾಗ್ರಾಹಕ ಲೀ ಕಾಲಿಂಗ್ಸ್ ಮೊಸಳೆಯಂತಿದ್ದ ಜೀವಿಯನ್ನು ನೋಡಿರುವುದಾಗಿ ಹೇಳಿದ್ದರು. ಆದರೆ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ ಎಂಬುದಾಗಿ ಹೇಳಿದ್ದರು. ಬಳಿಕ ಹಲವಾರು ಮಂದಿ ತಾವು ಕೂಡ ಮೊಸಳೆ ನೋಡಿರುವುದಾಗಿ ಹೇಳಿಕೆ ನೀಡಿದ್ದರು.
ಪ್ರದೇಶದಲ್ಲಿ ಸರೀಸೃಪಗಳ ಅಸ್ತಿತ್ವದ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರಾ ಒತ್ತಾಯಿಸಿದ್ದಾರೆ. ಪ್ರತಿ ದಿನವೂ ಯಾರಾದರೂ ತಾವು ಪ್ರಾಣಿಯನ್ನು ನೋಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.