
ಬ್ರಿಟನ್ನಿನ 33 ವರ್ಷದ Jane Tarrant ಗೆ ಇದ್ದಂತಹ ವಿಚಿತ್ರ ಸಮಸ್ಯೆ ಎಂದರೆ ಆಕೆಯ ಉಸಿರಾಟವು ಹೆಚ್ಚಾಗಿ ಬಾಯಿಯಿಂದ ಆಗುತ್ತಿತ್ತು. ಬಹಳ ದಣಿವಾದಾಗ ನಾವೆಲ್ಲರೂ ಏದುಸಿರು ಬಿಡುವಂತೆ ಅವರು ಸಾಮಾನ್ಯ ಉಸಿರಾಟ ನಡೆಸುತ್ತಿದ್ದರು.
ನೋಡಿದವರಿಗೆ ಗಾಬರಿ ಹುಟ್ಟಿಸಿದರೂ ಕೂಡ ಜೇನ್ ಪತಿಗೆ ಇದು ನಿತ್ಯದ ಬವಣೆ ಆಗಿ ಹೋಗಿತ್ತು. ನಾಲ್ಕು ಹೆಜ್ಜೆಗಳು ನಡೆದರೆ ಸಾಕು ಜೇನ್ಗೆ ಬಹಳ ಸುಸ್ತಾಗುತ್ತಿತ್ತು. ಬಹಳ ಮುಖ್ಯವಾಗಿ ಆಕೆಯು ಮಲಗಿದಾಗ ಬಾಯಿಯ ಉಸಿರಾಟದ ಪರಿಣಾಮವಾಗಿ ಗೊರಕೆ ಸದ್ದು ಬಹಳ ಜೋರಾಗಿತ್ತು. ಇದರಿಂದ ಪತಿ ಹಾಗೂ ಮಗುವಿಗೆ ನಿದ್ರೆಯ ಭಂಗವಾಗುತ್ತಿತ್ತು.
ಹಲವು ವೈದ್ಯರನ್ನು ಸಂಪರ್ಕಿಸಿದರೂ ಜೇನ್ಗೆ ಸೂಕ್ತ ಪರಿಹಾರ ಸಿಗಲಿಲ್ಲ. ಕೊನೆಗೆ, ಆಕೆಯೇ ಒಂದು ಉಪಾಯ ಮಾಡಿದಳು. ಬಾಯಿಗೆ ಗಮ್ ಟೇಪ್ ಹಾಕಿಕೊಂಡಳು.
ಹೌದು, ಇದರಿಂದಾಗಿ ಆಕೆಯ ಬಾಯಿಯು ಯಾವಾಗಲೂ ಮುಚ್ಚಿಕೊಂಡೇ ಇರಲಿದ್ದು, ಅನಿವಾರ್ಯವಾಗಿ ದೇಹದ ಉಸಿರಾಟವು ಉಳಿದವರಂತೆ ಮೂಗಿನಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ. ಈ ಅಭ್ಯಾಸವನ್ನು ದೇಹಕ್ಕೆ ಮಾಡಿಸಲು ಜೇನ್ ಅವರು ಎಲ್ಲಿಯೇ ಹೋದರು ಸರಿಯೇ ಬಾಯಿಗೆ ಟೇಪ್ ಹಾಕಿಕೊಂಡೇ ತೆರಳುತ್ತಾರೆ. ಅದು ಶಾಪಿಂಗ್ ಇರಲಿ, ನಿದ್ರೆ ಇರಲಿ, ಟೇಪ್ ಮಾತ್ರ ಇದ್ದೇ ಇರುತ್ತದೆ.
ಸದ್ಯಕ್ಕೆ ಅವರ ಗೊರಕೆ ಶಬ್ದವು ತಗ್ಗಿದ್ದು, ಮನೆಯಲ್ಲಿ ಶಾಂತಿ ನೆಲೆಸಿದೆ. ಏದುಸಿರು ಬಿಡುವ ಅವರ ಅಭ್ಯಾಸ ಕೂಡ ಕಡಿಮೆ ಆಗಿದ್ದು, ಉಳಿದವರಂತೆ ಮೂಗಿನ ಹೊಳ್ಳೆಗಳ ಮೂಲಕವೇ ಸಾಮಾನ್ಯ ಉಸಿರಾಟ ನಡೆಸುತ್ತಿದ್ದಾರಂತೆ. ಖ್ಯಾತ ನ್ಯೂಸ್ ವೆಬ್ಸೈಟ್ ‘ದಿ ಸನ್’ಗೆ ಜೇನ್ ಅವರೇ ಈ ಎಲ್ಲ ವಿಚಾರಗಳನ್ನು ತಿಳಿಸಿದ್ದಾರೆ.