ಕಿವಿಯೊಳಗೆ ಏನಾದರೂ ಹೋದ್ರೆ ಅದರ ಕಿರಿಕಿರಿ ತಡೆದುಕೊಳ್ಳಲು ಆಗಲ್ಲ. ಅಂಥದ್ರಲ್ಲಿ ಕಿವಿಯೊಳಗೆ ಜೇಡ ಬಲೆಮಾಡಿಕೊಂಡಿದ್ರೆ ? ಅಬ್ಬಾ ! ಊಹಿಸಿಕೊಳ್ಳಲೂ ಭಯವಾಗುತ್ತದೆ ಅಲ್ವಾ? ಆದರೆ ಇಂತಹ ಪ್ರಸಂಗ ನಡೆದಿದೆ.
ಇಂಗ್ಲೆಂಡ್ ಚೆಷೈರ್‌ನ ಅರೆಕಾಲಿಕ ಶಿಕ್ಷಕಿ ಮತ್ತು 29 ವರ್ಷ ವಯಸ್ಸಿನ ತಾಯಿ ಲೂಸಿ ವೈಲ್ಡ್ ಇಂತಹ ಭೀಕರತೆಯನ್ನ ಅನುಭವಿಸಿದ್ದಾರೆ. ಆರಂಭದಲ್ಲಿ ಅವರು ಸಣ್ಣ ಪ್ರಮಾಣದಲ್ಲಿ ಕಿವಿಯ ಕಿರಿಕಿರಿಯನ್ನು ಅನುಭವಿಸಿದ್ದಾರೆ. ಇದನ್ನು ಕಿವಿಯಲ್ಲಿ ಗುಗ್ಗೆ ಶೇಖರಣೆಯಾಗಿರಬಹುದು ಎಂದು ನಿರ್ಲಕ್ಷಿಸಿದ್ದಾರೆ. ಆದರೆ ದಿನ ಕಳೆದಂತೆ ಕಿವಿಯಲ್ಲಿ ಕಿರಿಕಿರಿ, ನೋವು ಜಾಸ್ತಿಯಾದಾಗ ದಿಗಿಲಿಗೆ ಬಿದ್ದರು.
ನಂತರ ಲೂಸಿ ಕ್ಯಾಮೆರಾ ಹೊಂದಿರುವ ಕಿವಿ ಸ್ವಚ್ಛಗೊಳಿಸುವ ಸಾಧನವಾದ ಸ್ಮಾರ್ಟ್‌ಬಡ್ ಅನ್ನು ಬಳಸಿ ನೋಡಿದಾಗ ಆಘಾತವಾಗಿತ್ತು. ಯಾಕೆಂದರೆ ಅವರ ಕಿವಿಯಲ್ಲಿ ಜೇಡ ಕಂಡಿತ್ತು.
ಗಾಬರಿಯಲ್ಲಿ ಲೂಸಿ ತನ್ನ ಮಗುವಿನ ಬೆರಳಿನ ಉಗುರಿನ ಗಾತ್ರದಲ್ಲಿ ಕಂಡ ಜೇಡವನ್ನು ಹೊರತೆಗೆಯಲು ಬೆಚ್ಚಗಿನ ಆಲಿವ್ ಎಣ್ಣೆಯನ್ನು ಬಳಸಿದರು. ಅದು ಹೇಗೆ ಅಲ್ಲಿಗೆ ಬಂದಿತು ಎಂದು ನಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆ ಎಂದು ಲೂಸಿ ಸೌತ್ ವೆಸ್ಟ್ ನ್ಯೂಸ್ ಸೇವೆಗೆ ತಿಳಿಸಿದ್ದಾರೆ. ಹೇಗೋ ಜೇಡವನ್ನು ಹೊರತೆಗೆದಾಗ ಆಕೆಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿತ್ತು.
ಅದೇನೆಂದರೆ ಕಿವಿನೋವೆಂದು ವೈದ್ಯರನ್ನು ಸಂಪರ್ಕಿಸಿದಾಗ ಸ್ಮಾರ್ಟ್‌ಬಡ್‌ನೊಂದಿಗೆ ಮತ್ತೊಂದು ತಪಾಸಣೆ ಮಾಡಿದಾಗ ಅಲ್ಲಿ ಜೇಡ ಕಟ್ಟಿದ್ದ ಗೂಡಿತ್ತು. ಇದನ್ನು ತೆಗೆದುಹಾಕುವ ನೋವು ಹೆರಿಗೆ ನೋವಿಗೆ ಸಮವಿತ್ತೆಂದು ಲೂಸಿ ತಿಳಿಸಿದ್ದಾರೆ. ಜೇಡ ಕಿವಿಯಿಂದ ಹೊರಹೋಗಿದ್ದರೂ ಅದರ ಗೂಡನ್ನು ತೆಗೆದ ಅನುಭವವಂತೂ ನನ್ನನ್ನು ಗಾಯಗೊಳಿಸಿದೆ ಎಂದು ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ.