ಕೇವಲ 22 ವಾರಗಳಲ್ಲಿ ಜನಿಸಿದ ಬ್ರಿಟನ್ ತ್ರಿವಳಿ ಸಹೋದರಿಯರು ವಿನೂತನ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಫೆಬ್ರವರಿ 2021ರಲ್ಲಿ ಜನಿಸಿದ ಈ ತ್ರಿವಳಿಗಳು – ರೂಬಿ ರೋಸ್, ಪೇಟನ್ ಜೇನ್ ಮತ್ತು ಪೋರ್ಶಾ-ಮೇ ಹಾಪ್ಕಿನ್ಸ್ – ಜನಿಸಿದ ವೇಳೆ ಮೂವರೂ ಸೇರಿ ಬರೀ 1.28 ಕೆಜಿ ತೂಕವಿದ್ದರು. ಈ ಮೂಲಕ ಜನಿಸಿದ ಅವಧಿಯಲ್ಲಿ ಅತ್ಯಂತ ಕಡಿಮೆ ತೂಕವಿದ್ದ ತ್ರಿವಳಿಗಳು ಎಂಬ ಶ್ರೇಯಕ್ಕೂ ಈ ಮಕ್ಕಳು ಪಾತ್ರರಾಗಿದ್ದಾರೆ.
ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಂದರ್ಭದಲ್ಲಿ ತಾನು ತ್ರಿವಗಳಿ ಮಕ್ಕಳಿಗೆ ತಾಯಿಯಾಗಲಿದ್ದೇನೆ ಎಂದು ಬ್ರಿಸ್ಟಾಲ್‌ನ ಮೈಕೆಲಾ ವೈಟ್‌ಗೆ ತಿಳಿದು ಬಂದಿದೆ. ಈ ಸುದ್ದಿ ಬಂದಾಗ ಆಕೆ 19ನೇ ವಾರದ ಗರ್ಭಾವಸ್ಥೆಯಲ್ಲಿದ್ದರು. ಇದಾದ ಮೂರೇ ತಿಂಗಳಿಗೆ ತ್ರಿವಳಿಗಳಿಗೆ ಜನ್ಮವಿತ್ತಿದ್ದಾರೆ ಮೈಕೆಲಾ.
“ನನಗೆ ತ್ರಿವಳಿಯ ಜನನವಾಗಲಿದೆ ಎಂದು ತಿಳಿದಾಗಿನಿಂದ ಇಂದಿನವರೆಗೂ, ನನಗೆ ತಿಳಿದಂತೆ ಅತ್ಯಂತ ತ್ವರಿತವಾಗಿ ಮುಕ್ತಾಯ ಕಂಡ ಹೆರಿಗೆಯ ಪಯಣವಾಗಿದೆ,” ಎಂದು ತ್ರಿವಳಿಯ ತಂದೆ ಜೇಸನ್ ಹಾಪ್ಕಿನ್ಸ್ ಹೇಳುತ್ತಾರೆ.
ಈ ತ್ರಿವಳಿಗಳ ಜನನವಾಗುತ್ತಲೇ, 72 ಗಂಟೆಗಳ ಕಾಲ ವಿಶೇಷ ಇನ್‌ಕ್ಯೂಬೇಟರ್‌ನಲ್ಲಿ ಇರಿಸಿ, ಗರ್ಭದಲ್ಲಿ ಇನ್ನಷ್ಟು ದಿನಗಳ ಕಾಲ ಆಗಬೇಕಿದ್ದ ಆರೈಕೆಯನ್ನು ಕೃತಕವಾಗಿ ಮಾಡಲಾಗಿದೆ. ಇದಾದ ಬಳಿಕ ಎನ್‌ಐಸಿಯುನಲ್ಲಿ ತಿಂಗಳುಗಟ್ಟಲೇ ಕಳೆದ ತ್ರಿವಳಿ ಮಕ್ಕಳು ನಿಧಾನವಾಗಿ ಕೈ-ಕಾಲುಗಳಿಗೆ ಶಕ್ತಿ ಪಡೆದುಕೊಂಡಿದ್ದಾರೆ.
ಈ ತ್ರಿವಳಿಗೀಗ ಎರಡು ವರ್ಷಗಳು ತುಂಬಿದೆ. ಇವರಿಗೆ ಇಬ್ಬರು ಹಿರಿಯ ಒಡಹುಟ್ಟಿದವರೂ ಇದ್ದಾರೆ.