ಭಾರತದಲ್ಲಿ ಗೌರಿ – ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಊರು – ಕೇರಿಗಳಲ್ಲಿ ಗಣೇಶನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ 31ರಂದು ಆಚರಿಸಲಾಗುತ್ತದೆ.
ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಮಂಕಾಗಿದ್ದ ಗಣೇಶ ಚತುರ್ಥಿ ಈಗ ಮತ್ತೆ ಅದ್ದೂರಿಯಿಂದ ನಡೆಯುವ ನಿರೀಕ್ಷೆ ಇದೆ. ಭಾರತದಲ್ಲಿ ಗೌರಿ – ಗಣೇಶ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದ್ದರೆ ಅತ್ತ ಬ್ರಿಟನ್ ನಲ್ಲಿ ಚತುರ್ಥಿ ಅಂಗವಾಗಿ ಗಣೇಶನ ಚಿನ್ನದ ಗಟ್ಟಿ ಬಿಡುಗಡೆಯಾಗಿದೆ.
ಹೌದು, ಬ್ರಿಟನ್ ಸರ್ಕಾರಿ ಸ್ವಾಮ್ಯದ ಟಂಕಸಾಲೆ ರಾಯಲ್ ಮಿಂಟ್, ಗಣೇಶನ ಚಿತ್ರ ಕೆತ್ತಿದ 24 ಕ್ಯಾರೆಟ್ ಚಿನ್ನದ ಗಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ವಾರದಿಂದ ಆನ್ಲೈನ್ ನಲ್ಲಿ ಮಾರಾಟವಾಗುತ್ತಿದೆ.
20 ಗ್ರಾಂ ನ 999.0 ಫೈನ್ ಗೋಲ್ಡ್ ಗಣೇಶ ಬುಲಿಯನ್ ಬಾರ್ ಬೆಲೆ 1,111,80 ರೂಪಾಯಿಗಳಾಗಿದ್ದು, ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ರಾಯಲ್ ಮಿಂಟ್ ಬಿಡುಗಡೆಗೊಳಿಸಿದ್ದ 24 ಕ್ಯಾರಟ್ ಲಕ್ಷ್ಮಿ ಚಿತ್ರದಂತೆಯೇ ಈ ಗೋಲ್ಡ್ ಬಾರ್ ಇದೆ. ಲಕ್ಷ್ಮಿ ಚಿತ್ರವನ್ನು ವಿನ್ಯಾಸಗೊಳಿಸಿದ್ದ ಎಮ್ಮಾ ನೋಬಲ್ ಅವರೇ ಗಣೇಶನ ಚಿತ್ರವನ್ನು ಕೂಡ ವಿನ್ಯಾಸ ಮಾಡಿದ್ದಾರೆ.