ಭಾರತೀಯ ಮೂಲದ ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಭಾರತೀಯರು ಸಂಭ್ರಮಿಸಿದ್ದರು. ಅಲ್ಲದೇ ರಿಷಿ ಸುನಾಕ್ ಇನ್ಫೋಸಿಸ್ ನಾರಾಯಣ ಮೂರ್ತಿ – ಸುಧಾ ಮೂರ್ತಿ ದಂಪತಿ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿದ್ದು, ಕರ್ನಾಟಕದ ಅಳಿಯ ಎಂಬ ಹೆಮ್ಮೆಯೂ ಇದೆ.
ಬ್ರಿಟನ್ ಪ್ರಧಾನಿಯಾಗಿದ್ದರೂ ಸಹ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ರಿಷಿ ಸುನಾಕ್ ಹಾಗೂ ಅಕ್ಷತಾ ತಮ್ಮ ಮಕ್ಕಳಿಗೆ ಭರತನಾಟ್ಯ ಸೇರಿದಂತೆ ಹಲವು ಸಾಂಪ್ರದಾಯಿಕ ಕಲೆಗಳನ್ನು ಕಲಿಸಿಕೊಡುತ್ತಿದ್ದಾರೆ. ಇದರ ಜೊತೆಗೆ ಬ್ರಿಟನ್ ನಲ್ಲೂ ಭಾರತೀಯ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ.
ರಿಷಿ ಸುನಾಕ್ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಹಲವು ದೇವಾಲಯಗಳಿಗೆ ಈ ದಂಪತಿ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದರು ಜೊತೆಗೆ ಗೋ ಪೂಜೆಯನ್ನು ಸಹ ನೆರವೇರಿಸಿದ್ದರು. ಇದೀಗ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಲಂಡನ್ ನಲ್ಲಿರುವ 10 ಡೌನಿಂಗ್ ಸ್ಟ್ರೀಟ್ ನಿವಾಸದಲ್ಲಿ ಪ್ರಧಾನಿ ಕಚೇರಿಯ ಸಿಬ್ಬಂದಿಗೆ ಭರ್ಜರಿ ಭೋಜನ ಉಣಬಡಿಸಿದ್ದಾರೆ.
ಬಾಳೆ ಎಲೆಯ ಮೇಲೆ ಭೋಜನವನ್ನು ಬಡಿಸಿದ್ದು ಪ್ರಧಾನಿ ಕಚೇರಿಯ ಸಿಬ್ಬಂದಿ ಇದನ್ನು ಸವಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.