ಅಹ್ಮದಾಬಾದ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಗುರುವಾರ ಗುಜರಾತ್ ರಾಜ್ಯದ ಅಹ್ಮದಾಬಾದ್‌ನಲ್ಲಿ ಭೇಟಿಯಾಗಿದ್ದಾರೆ.
ಗುಜರಾತ್‌ಗೆ ಭೇಟಿ ನೀಡಿದ ಬ್ರಿಟನ್ ದೇಶದ ಪ್ರಥಮ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಅದಾನಿ ಕೇಂದ್ರ ಕಚೇರಿಯಲ್ಲಿ ಆತಿಥ್ಯ ನೀಡುವುದು ಗೌರವವೆಂದು ಭಾವಿಸುತ್ತೇನೆ. ವಾತಾವರಣ ಮತ್ತು ಸುಸ್ಥಿರತೆಯ ಅಜೆಂಡಾದೊಂದಿಗೆ ನವೀಕರಿಸಬಹುದಾದ ಶಕ್ತಿಮೂಲಗಳು, ಎಚ್2 ಮತ್ತು ನ್ಯೂ ಎನರ್ಜಿ ಕುರಿತು ಚರ್ಚಿಸಿದ್ದೇವೆ. ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಬ್ರಿಟನ್ ಕಂಪನಿಗಳ ಜತೆ ಸೇರಿ ಕೆಲಸ ಮಾಡುವುದಾಗಿ ಅದಾನಿ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಜಾನ್ಸನ್ ಜತೆಗಿರುವ ಭಾವಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿರುವ ಜಾನ್ಸನ್ ಗುರುವಾರ ಬೆಳಗ್ಗೆ ಗುಜರಾತ್‌ಗೆ ಬಂದಿಳಿದರು. ಬಳಿಕ ಸಬರಮತಿ ಆಶ್ರಮಕ್ಕೂ ಭೇಟಿ ನೀಡಿದರು.
ಗುಜರಾತ್ ಭಾರತದ ಐದನೇ ಅತಿದೊಡ್ಡ ರಾಜ್ಯವಾಗಿದ್ದು, ಬ್ರಿಟನ್‌ನಲ್ಲಿರುವ ಭಾರತೀಯ ಸಮುದಾಯದ ಪೈಕಿ ಅರ್ಧದಷ್ಟು ಜನ ಗುಜರಾತಿಗಳೇ ಆಗಿದ್ದಾರೆ. ಈ ನಿಟ್ಟಿನಲ್ಲಿ ಅಲ್ಲಿನ ಪ್ರಧಾನಿಯ ಗುಜರಾತ್ ಭೇಟಿ ಮಹತ್ವ ಪಡೆದಿದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ವೃದ್ಧಿಗೂ ಇದು ಪೂರಕವಾಗಿದೆ. ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನದ ಸಹಯೋಗಕ್ಕೆ ಸಂಬಂಧಿಸಿ ಹಲವು ಒಪ್ಪಂದಗಳನ್ನೂ ಜಾನ್ಸನ್ ಘೋಷಿಸಿದ್ದಾರೆ. ಇನ್ನಷ್ಟು ಭಾರತೀಯರಿಗೆ ಈ ವರ್ಷ ವೀಸಾ ನೀಡಲು ತಾವು ಉದ್ದೇಶಿಸಿರುವುದಾಗಿ ಜಾನ್ಸನ್ ತಿಳಿಸಿದ್ದಾರೆ.