ಅತ್ಯಪರೂಪದ ತಳಿಯ ಎರಡು ಏಡಿಗಳು ಮತ್ತೊಬ್ಬರ ಊಟದ ಪಾಲಾಗುವುದನ್ನು ಬ್ರಿಟನ್‌ನ ವ್ಯಕ್ತಿಯೊಬ್ಬರು ತಪ್ಪಿಸಿ, ಅವುಗಳಿಗೆ ಮರುಜೀವ ಕೊಟ್ಟಿದ್ದಾರೆ.
ವೃತ್ತಿಯಲ್ಲಿ ಕೆಟರರ್ ಆಗಿರುವ ಜೋಸೆಫ್ ಎಂದಿನಂತೆ ಲೀಸೆಸ್ಟರ್ ನಗರದ ಮಾಕ್ರೋ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಮೀನುಗಳ ಖರೀದಿಗೆ ಬಂದಿದ್ದ ವೇಳೆ ಅವರ ಕಣ್ಣಿಗೆ ಕಿತ್ತಳೆ ಬಣ್ಣದ ಈ ಎರಡು ಕೆನಡಿಯನ್ ಏಡಿಗಳು ಬಿದ್ದಿವೆ. ಈ ಏಡಿಗಳು ಸಿಗುವ ಸಾಧ್ಯತೆ ಮೂರುಕೋಟಿಗೆ ಒಮ್ಮೆ ಎನ್ನುವಷ್ಟು ಅಪರೂಪ.
“ದೂರದಿಂದ ಕಿತ್ತಳೆ ಬಣ್ಣದ ಈ ಎರಡು ಏಡಿಗಳನ್ನು ಕಂಡಾಗ ಅವು ಗೊಂಬೆಗಳು ಅನಿಸಿತ್ತು. ಏಕೆಂದರೆ, ಅಡುಗೆ ಮಾಡುವ ಸಂದರ್ಭ ಹೊರತುಪಡಿಸಿ, ಇದೇ ಮೊದಲ ಬಾರಿಗೆ ನಾನು ಈ ಏಡಿಗಳನ್ನು ನೋಡುತ್ತಿದ್ದೆ. ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳು ಜೀವಂತವಾಗಿವೆ ಎಂದು ಅರಿವಿಗೆ ಬಂತು” ಎಂದು ಜೋಸೆಫ್ ತಿಳಿಸಿದ್ದಾರೆ.
ಖುದ್ದು ತಾನೇ ಮೀನುಗಾರನಾಗಿದ್ದರೂ ಸಹ ಕಳೆದ ಹತ್ತು ವರ್ಷಗಳಿಂದಲೂ ಮಾರುಕಟ್ಟೆಯಲ್ಲಿ ಒಂದೇ ಒಂದು ಬಾರಿಯೋ ಈ ಜೀವಿಗಳನ್ನು ಕಂಡಿರಲಿಲ್ಲವೆಂದು ಕೆಟರರ್ ಹೇಳಿಕೊಂಡಿದ್ದಾರೆ.