ಲಂಡನ್: ಕೆಲ ದಿನಗಳ ಹಿಂದೆ ಮೂರು ಡಾಲರ್ಗೆ (ಸುಮಾರು 2,301 ರೂಪಾಯಿ) ಖರೀದಿಸಿದ್ದ ಲಾಟರಿಗೆ ಲಂಡನ್ನ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಮೂರು ಮಿಲಿಯನ್ ಡಾಲರ್ (ಸುಮಾರು 27.62 ಕೋಟಿ ರೂಪಾಯಿ) ಬಂಗಲೆ ಬಹುಮಾನವಾಗಿ ಸಿಕ್ಕಿದೆ!
ಈ ಅದೃಷ್ಟವಂತನ ಹೆಸರು ಉತ್ತಮ್ ಪರ್ಮಾಮಡೆ. ಸುಮಾರು 5.3 ಎಕರೆ ಪ್ರದೇಶದಲ್ಲಿ ಇರುವ ಈ ಬಂಗಲೆಯನ್ನು ಈಗ ಉತ್ತಮ್ ಪರ್ಮಾಮಡೆ ಹಾಗೂ ರಾಖಿ ದಂಪತಿ ಮಾರಾಟಕ್ಕೆ ಇಟ್ಟಿದ್ದಾರೆ. 27.62 ಕೋಟಿ ರೂಪಾಯಿ ಬೆಲೆ ಬಾಳುವ ಈ ಬಂಗಲೆಯನ್ನು ಅವರು 4 ಮಿಲಿಯನ್ ಪೌಂಡ್ ಅಂದರೆ ಸುಮಾರು 37.83 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸಿದ್ಧರಾಗಿದ್ದಾರೆ.
ನದಿಮುಖದ ವಿಹಂಗಮ ನೋಟವನ್ನು ಹೊಂದಿರುವ ಈ ಐಷಾರಾಮಿ ಬಂಗಲೆಯನ್ನು ಮಾರಿ ಭಾರಿ ಲಾಭ ಗಳಿಸಲು ದಂಪತಿ ಉದ್ದೇಶಿಸಿರುವುದು ಒಂದೆಡೆಯಾದರೆ, ಈ ಐಷಾರಾಮಿ ಬಂಗಲೆ ತಮಗೆ ಸರಿಹೊಂದುತ್ತಿಲ್ಲ ಎಂದಿದ್ದಾರೆ ಈ ದಂಪತಿ. “ಈ ಬೃಹತ್ ಬಂಗಲೆಯಲ್ಲಿ ವಾಸಿಸಲು ನಮಗೆ ಕಸಿವಿಸಿಯಾಗುತ್ತಿದೆ. ಈ ಹೊಸ ಪರಿಸರ ನಮಗೆ ಹೊಂದಾಣಿಕೆ ಆಗುತ್ತಿಲ್ಲ. ಸುಂದರವಾಗಿರುವ ಸ್ಥಳದಲ್ಲಿನ ಅದ್ಭುತ ಮನೆ ಇದಾಗಿದ್ದರೂ, ಶ್ರೀಮಂತ ಜನರೊಂದಿಗೆ ನಾವು ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ’ ಎಂದಿದ್ದಾರೆ.
ತಮ್ಮ ಬಳಿ ಇರುವ ಚಿಕ್ಕ ಮನೆಯಲ್ಲಿಯೇ ಉಳಿದುಕೊಳ್ಳಲು ಈ ದಂಪತಿ ಇಷ್ಟಪಟ್ಟಿದ್ದು, ಮನೆ ಚಿಕ್ಕದಾದರೂ ಅಲ್ಲಿನ ಪರಿಸರ ತಮಗೆ ತುಂಬಾ ಇಷ್ಟ. ನೆರೆಹೊರೆಯವರ ಜತೆ ಹೊಂದಾಣಿಕೆ ಮಾಡಿಕೊಂಡು ಅಲ್ಲಿ ಬದುಕುವುದು ಇಷ್ಟ, ಈ ಬಂಗಲೆಯ ಬಳಿ ಇರುವ ಶ್ರೀಮಂತರ ಜತೆ ಹೊಂದಾಣಿಕೆ ಕಷ್ಟ ಎಂದಿದ್ದಾರೆ. ಶೀಘ್ರದಲ್ಲಿ ಬರುವ ತಮ್ಮ ಹುಟ್ಟುಹಬ್ಬವನ್ನು ಈ ಬಂಗಲೆಯಲ್ಲಿ ಆಚರಿಸಲು ನಿರ್ಧರಿಸಿರುವ ಉತ್ತಮ್ ಪರ್ಮಾಮಡೆ ನಂತರ ಈ ಮನೆಯ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.