ಲಂಡನ್: ಉಕ್ರೇನ್ ನಿರಾಶ್ರಿತೆಯಾಗಿ ಬ್ರಿಟನ್‌ಗೆ ಬಂದವಳ ಪ್ರೇಮಪಾಶಕ್ಕೆ ಬಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನೇ ತೊರೆದು ಆಕೆಯೊಂದಿಗೆ ಓಡಿ ಹೋಗಿದ್ದಾನೆ ಎಂದು ʼದ ಸನ್ʼ ವರದಿ ಮಾಡಿದೆ.
ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ಟೋನಿ ಗಾರ್ನೆಟ್ (29) ಈ ರೀತಿ ಓಡಿ ಹೋದ ವ್ಯಕ್ತಿ. ನಿರಾಶ್ರಿತೆ ಸೋಫಿಯಾ ಕಾರ್ಕಡಿಮ್ (22). ಸೋಫಿಯಾಗಾಗಿ ಟೋನಿ ತನ್ನ 10 ವರ್ಷದ ದಾಂಪತ್ಯ ಬಂಧವನ್ನೇ ಮುರಿದುಬಿಟ್ಟಿದ್ದಾನೆ. ಈತ ಎರಡು ಮಕ್ಕಳ ತಂದೆ ಕೂಡ.
ಸೋಫಿಯಾ ಪಶ್ಚಿಮ ಉಕ್ರೇನ್‌ನ ಎಲ್ವಿನ್ ನಗರದವಳು. ರಷ್ಯಾ ದಾಳಿ ಆರಂಭವಾದ ಬಳಿಕ ಅಲ್ಲಿಂದ ನಿರಾಶ್ರಿತೆಯಾಗಿ ಬ್ರಿಟನ್‌ಗೆ ಬಂದವಳು.
ʼದ ಸನ್ʼ ಪೋರ್ಟಲ್‌ಗೆ ಆಕೆ ತನ್ನ ಪ್ರೇಮಕಥೆಯನ್ನು ಹೇಳಿಕೊಂಡದ್ದು ಹೀಗೆ-
“ರಷ್ಯಾದ ಆಕ್ರಮಣದಿಂದ ಪಲಾಯನ ಮಾಡುವ ಉಕ್ರೇನಿಯನ್ನರಿಗೆ ಸಹಾಯ ಮಾಡುವವರನ್ನು ಅರಸುತ್ತಿದ್ದಾಗ ಫೇಸ್‌ಬುಕ್ ಮೂಲಕ ಟೋನಿ ಗಾರ್ನೆಟ್ ಮತ್ತು ಅವರ ಪತ್ನಿ ಲೋರ್ನಾ (28) ಅವರ ಪರಿಚಯವಾಯಿತು. ನಾನು ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಯುಕೆ ವೀಸಾಗೆ ಅರ್ಜಿ ಸಲ್ಲಿಸಿ ಬರ್ಲಿನ್‌ನಲ್ಲಿ ಕಾಯುತ್ತಿದ್ದ ಸಂದರ್ಭ ಅದು. ಮೇ 4ರಂದು ಮ್ಯಾಂಚೆಸ್ಟರ್‌ಗೆ ಬಂದಿಳಿದೆ.
ಅಲ್ಲಿ ಟೋನಿ ಕುಟುಂಬದ ನೇರ ಪರಿಚಯವಾಯಿತು. ಅವರ ಆರು ವರ್ಷದ ಮತ್ತು ಮೂರು ವರ್ಷದ ಹೆಣ್ಣುಮಕ್ಕಳು ಕೂಡ ನನ್ನನ್ನು ಇಷ್ಟಪಟ್ಟರು. ಅವರು ನನ್ನನ್ನು ಅವರ ಮನೆಗೆ ಸ್ವಾಗತಿಸಿದರು. ಮೊದಲ ನೋಟಕ್ಕೆ ನನಗೆ ಗಾರ್ನೆಟ್ ಮೇಲೆ ಪ್ರೇಮಾಂಕುರವಾಯಿತು. ಅದೇ ಅನುಭೂತಿ ಗಾರ್ನೆಟ್ ಕಂಗಳಲ್ಲೂ ಕಂಡೆ.
ಟೋನಿ ಮತ್ತು ನಾನು ಆಪ್ತರಾಗುತ್ತಿರುವುದನ್ನು ಕಂಡು ಲೋರ್ನಾಗೆ ಅಸೂಯೆ ಶುರುವಾಯಿತು. ಟೋನಿಯಲ್ಲಿ ಅತೃಪ್ತಿ ಇರುವುದು ನನ್ನ ಅರಿವಿಗೂ ಬಂತು.
ನಾವು ಒಂದಾಗಲು ನಿಶ್ಚಯಿಸಿದೆವು. ಲೋರ್ನಾ ನಮ್ಮೊಂದಿಗೆ ಜಗಳವಾಡಿದಳು. ಕೊನೆಗೆ ಲೋರ್ನಾಳಿಂದ ದೂರಾಗಲು ಟೋನಿ ನಿಶ್ಚಯಿಸಿದ. ನಾವು ಪ್ರತ್ಯೇಕವಾದೆವು. ಈಗ ನಾವಿಬ್ಬರು ದಂಪತಿ. ಇದು ನಮ್ಮ ಪ್ರೇಮಕಥೆ”.